ಬೆಂಗಳೂರು,ಜ 21 : ಮರಳು ಮಾಫಿಯಾ ಮಿತಿ ಮೀರುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ 'ಬ್ರಾಂಡೆಡ್ ನೈಸರ್ಗಿಕ ನದಿ ಮರಳನ್ನು ಚೀಲದಲ್ಲಿ ಮಾರಾಟ ಮಾಡುವ ಹೊಸ ಯೋಜನೆಯನ್ನು ರಾಜ್ಯದ ಜನತೆಗೆ ಪರಿಚಯಿಸಿದೆ. ಎಂಎಸ್ಐಎಲ್ ವತಿಯಿಂದ ದೇಶದಲ್ಲಿಯೇ ಮೊದಲ ಬಾರಿಗೆ ಉತ್ತಮ ಮರಳು ಇನ್ನು ಗೋಣಿಚೀಲಗಳ ಲೆಕ್ಕದಲ್ಲಿ ದೊರೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್, ಬಿಡದಿಯಲ್ಲಿ ಯಾರ್ಡ್ ಮಾಡಲಾಗಿದ್ದು, ಅಲ್ಲಿ ಮರಳು ಮಾರಾಟಕ್ಕೆ ಲಭ್ಯವಿದೆ. ತದನಂತರ ಬೆಂಗಳೂರಿನ ಚನ್ನಸಂದ್ರ, ದೊಡ್ಡಬಳ್ಳಾಪುರ, ತುಮಕೂರಿನ ಕ್ಯಾತ್ಸಂದ್ರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಎಎಂಎಸ್ಐಎಲ್ ವತಿಯಿಂದಲೇ, ಮರಳು ಚೀಲಗಳಿಗೆ ರೇಟು ನಿಗದಿಪಡಿಸಲಾಗಿದೆ. 50 ಕೆಜಿ ಚೀಲ ಹಾಗೂ ಟನ್ ಲೆಕ್ಕದಲ್ಲಿ ಮರಳನ್ನು ಖರೀದಿಸಬಹುದು. ಪ್ರತಿ ಟನ್ ಮರಳಿಗೆ ಜಿಎಸ್ಟಿ ತೆರಿಗೆ ಸೇರಿ 4 ಸಾವಿರ ರೂ. ದರ ನಿಗದಿಪಡಿಸಲಾಗಿದೆ. 50 ಕೆಜಿ ಚೀಲಕ್ಕೆ 200 ರಿಂದ 220 ರೂ. ದರ ನಿಗದಿಪಡಿಸಲಾಗಿದೆ ಎಂದರು.
ಇದಲ್ಲದೆ ಮಲೇಷ್ಯಾದಿಂದ ಹಡಗಿನ ಮೂಲಕ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ಬಂದರುಗೆ ಮೊದಲ ಹಂತವಾಗಿ 54 ಸಾವಿರ ಟನ್ ಮರಳು ಪೂರೈಕೆಯಾಗಿದೆ. ಮಲೇಷ್ಯಾ ಮರಳಿಗೆ 50 ಕೆಜಿ ಚೀಲಕ್ಕೆ 190 ರೂ. ದರ ನಿಗದಿಪಡಿಸಲಾಗಿದ್ದು,1 ಟನ್ ಎಲ್ಲ ತೆರಿಗೆ ಸೇರಿ 4 ಸಾವಿರ ರೂ. ಇರಲಿದೆ. ಸದ್ಯ ರಾಜ್ಯದಲ್ಲಿ ಮರಳಿನ ಬೆಲೆ 10 ಟನ್ ಲಾರಿ ಲೋಡ್ಗೆ 50 ರಿಂದ 60 ಸಾವಿರ ರೂ ಇದೆ. ಮಲೇಷ್ಯಾ ಮರಳು ಖರೀದಿಯಿಂದ 10 ರಿಂದ 22 ಸಾವಿರ ರೂ. ವರೆಗೆ ಉಳಿತಾಯವಾಗಲಿದೆ ಎಂದರು.