ಉಳ್ಳಾಲ, ಡಿ 25 (Daijiworld News/PY) : ಮಂಗಳೂರು- ಕೊಜಪಾಡಿ ಕೆ ಎಸ್ ಆರ್ ಟಿಸಿ ಬಸ್ ಸೇವೆಗೆ ಕ್ರಿಸ್ಮಸ್ ಹಬ್ಬದ ಶುಭದಿನದಂದು ಗ್ರಾಮಚಾವಡಿ ಜಂಕ್ಷನ್ನಲ್ಲಿ ತಾವೇ ಖುದ್ದಾಗಿ ಚಾಲಕರಾಗಿ ಚಾಲನೆ ನೀಡಿದ ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್, ಮಂಗಳೂರು ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ಸುಗಳನ್ನು ಜಾರಿಗೆ ತರುವ ಯೋಜನೆಗಳಿವೆ. ಇದೀಗ ಪಜೀರು-ಪಾನೇಲ, ದೇರಳಕಟ್ಟೆ-ರೆಂಜಾಡಿ-ಅಂಬ್ಲಮೊಗರು ರಸ್ತೆಗೆ ಕೆಎಸ್ಆರ್ಟಿಸಿ ಬಸ್ಸುಗಳನ್ನು ಹಾಕಲು ಸರ್ವೇ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಬಳಿಕ ನಾಡಿದ ಅವರು, ನಾಟೆಕಲ್- ಮಂಜನಾಡಿ ರಸ್ತೆಗೂ ಕೆ ಎಸ್ ಆರ್ ಟಿ ಸಿ ಬಸ್ಸು ಹಾಕುವ ಯೋಜನೆಯಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ವಿಚಾರಣೆಯಲ್ಲಿದೆ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಆರ್ ಟಿ ಓ ಮೀಟಿಂಗ್ ಆದ ಬಳಿಕವಷ್ಟೇ ಖಾಯಂ ಅನುಮತಿ ದೊರೆಯುತ್ತದೆ. ಆದರೆ ಬಹಳ ಸಮಯದಿಂದ ಸಭೆ ನಡೆಯದೆ ಇರುವುದರಿಂದ ಖಾಯಂ ಅನುಮತಿ ದೊರೆಯಲು ಅಸಾಧ್ಯವಾಗಿದೆ. ಇದರಿಂದಲೇ ಬಸ್ಸು ಹಾಕುವಲ್ಲಿಯೂ ವಿಳಂಬವಾಗಿದೆ. ಮುಂದೆ ಜನರ ಸಹಕಾರದಿಂದ ಬಸ್ಸಿಗೆ ಲಾಭವಾದರೆ ಕೆಎಸ್ ಆರ್ ಟಿಸಿ ಸಂಸ್ಥೆ ಇನ್ನು ಹೆಚ್ಚು ಬಸ್ಸುಗಳನ್ನು ಹಾಕುತ್ತಾರೆ. ಕೊಜಪಾಡಿ ಬಸ್ಸು ಐದು ಗ್ರಾಮಗಳ ಜನರಿಗೆ ಸಹಕಾರಿಯಾಗಲಿದೆ. ಜನರು ಊರಿನ ಬಸ್ಸೆಂದು ಮನದಲ್ಲಿಟ್ಟು ಸಹಕರಿಸಬೇಕು. ಕ್ಷೇತ್ರದ ಆರ್ಥಿಕ ಸಬಲೀಕರಣ ನಡೆಸಲು ಜನತೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನಾಟೆಕಲ್ ನಲ್ಲಿ ಶೀಘ್ರದಲ್ಲೇ ತಾತ್ಕಾಲಿಕವಾಗಿ ತಾಲೂಕು ಕಚೇರಿಯು ಆರಂಭವಾಗಲಿದೆ. ಹರೇಕಳದಿಂದ ಅಡ್ಯಾರಿಗೆ ಹೋಗುವ ಸೇತುವೆಯ ಕಾಮಗಾರಿಯೂ ಶೀಘ್ರವೇ ಆರಂಭವಾಗಲಿದೆ. ಈ ಮೂಲಕ ಶಾಶ್ವತ ಕುಡಿಯುವ ನೀರಿನ ಯೋಜನೆಯೂ ಜಾರಿಯಾಗಲಿದ್ದು, 30 ಕೋಟಿ ಅನುದಾನದಡಿ ಗ್ರಾಮೀಣ ಭಾಗದ ರಸ್ತೆಗಳ ಕಾಂಕ್ರೀಟಿಕರಣ ನಡೆಸಲಾಗಿದೆ ಎಂದರು.
ಈ ಸಂದರ್ಭ ಹರೇಕಳ ಗ್ರಾ.ಪಂ ಅಧ್ಯಕ್ಷೆ ಅನಿತಾ ಡಿಸೋಜ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಪಜೀರು ಸಂತ ಮರ್ಸಿಯಮ್ಮನವರ ಚಚ್ 9 ಧರ್ಮಗುರು ಫಾ. ಸುನೀಲ್ ವೇಗಸ್, ಅಲ್ ಅಕ್ಸಾ ಮಸೀದಿ ಖತೀಬರಾದ ಶಹಜಹಾನ್ ಮಕ್ತೂಮಿ, ಪಜೀರು ಗ್ರಾ.ಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಹರೇಕಳ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ, ಜೆಡಿಎಸ್ ಮುಖಂಡ ಭರತ್ ರಾಜ್ ಶೆಟ್ಟಿ ಕಾಂಗ್ರೆಸ್ ಮುಖಂಡರುಗಳಾದ ಮುಸ್ತಾಫ ಹರೇಕಳ, ಅಚ್ಚುತ ಗಟ್ಟಿ, ರಹಿಮಾನ್ ಕೋಡಿಜಾಲ್, ಉಮ್ಮರ್ ಪಜೀರ್, ಮಹಮ್ಮದ್ ಬದ್ರಿಯಾನಗರ, ಇಮ್ತಿಯಾಝ್ ಪಜೀರು, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾ.ಪಂ ಸದಸ್ಯರುಗಳಾದ ಬದ್ರುದ್ದೀನ್,ಮಜೀದ್, ಸತ್ತಾರ್, ಅಶ್ರಫ್, ಕಲ್ಯಾಣಿ, ಹೆಚ್. ಸಾಲಿ, ಡಿವೈಎಫ್ ಐ ಮುಖಂಡ ರಫೀಕ್ ಹರೇಕಳ, ಎಸ್ ಡಿಪಿಐ ಮುಖಂಡ ಬಶೀರ್ ಹರೇಕಳ ಉಪಸ್ಥಿತರಿದ್ದರು.
ಸರಕಾರಿ ಬಸ್ಸು ಚಾಲಕರಾದ ಶಾಸಕರು:
ಗ್ರಾಮಚಾವಡಿಯಲ್ಲಿ ಉದ್ಘಾಟನೆಗೊಂಡ ಕೆಎಸ್ ಆರ್ ಟಿಸಿ ಬಸ್ಸನ್ನು ಶಾಸಕ ಯು.ಟಿ ಖಾದರ್ ಅವರೇ ಒಂದು ಕಿ.ಮೀ ಉದ್ದಕ್ಕೆ ಚಲಾಯಿಸಿ ಸರಕಾರಿ ಬಸ್ಸಿನಲ್ಲಿ ಚಾಲಕರಾದರು. ಈ ಹಿಂದೆ ಸಚಿವನಾಗಿದ್ದ ಅವಧಿಯಲ್ಲಿಯೂ ಬೋಳಿಯಾರಿನಲ್ಲಿ ಬಸ್ಸನ್ನು ಕೆಲ ಕಿ.ಮೀ ಉದ್ದಕ್ಕೆ ಚಲಾಯಿಸಿದ್ದರು. ಬಸ್ಸೊಳಗಡೆ ಗ್ರಾ.ಪಂ ಸದಸ್ಯರು, ಊರಿನ ಜನರು , ಜಿ.ಪಂ ಸದಸ್ಯೆ, ತಾ.ಪಂ ಅಧ್ಯಕ್ಷ ಎಲ್ಲರೂ ಪ್ರಯಾಣಿಕರಾಗಿದ್ದರು.
ಗ್ರಾಮದ ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಸರಿಯಾದ ಬಸ್ಸು ವ್ಯವಸ್ಥೆಯಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ ಸಂದರ್ಭ ಗ್ರಾ.ಪಂ ಹಾಗೂ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್ಸಿಗೆ ಮನವಿ ಮಾಡಿತ್ತು. ಅದರಂತೆ ಉಸ್ತುವಾರಿ ಸಚಿವರು ತುರ್ತಾಗಿ ಸ್ಪಂದಿಸಿ, ಶಾಸಕರ ಜತೆಗೂಡಿ ಕೆಎಸ್ಆರ್ಟಿಸಿ ಬಸ್ಸು ಹಾಕಲಾಗಿದೆ.-ಧನಲಕ್ಷ್ಮೀ ಗಟ್ಟಿ, ಜಿ.ಪಂ ಸದಸ್ಯರು
ಪಾವೂರಿಗೆ ಕೆಎಸ್ ಆರ್ಟಿಸಿ ಬಸ್ಸು ಬೇಕೆನ್ನುವುದು ಬಹುಕಾಲದ ಬೇಡಿಕೆಯಾಗಿತ್ತು. ಅದಕ್ಕಾಗಿ ಹಲವು ಹೋರಾಟಗಳನ್ನು ನಡೆಸಿದ್ದೇವೆ. 2011 ರಲ್ಲಿ ಆರ್ ಟಿ ಓ ಚಲೋ ಕಾರ್ಯಕ್ರಮದ ಮೂಲಕ ಆರ್ ಟಿ ಓ ಕಚೇರಿಗೆ ಮುತ್ತಿಗೆ ಹಾಕಿದ್ದೆವು. ಆ ವೇಳೆ ಭರವಸೆ ಮಾತ್ರ ದೊರೆತಿತ್ತು. 8 ವರ್ಷಗಳ ಹೋರಾಟದ ಫಲವಾಗಿ ಇಂದು ಸರಕಾರಿ ಬಸ್ಸು ಬಂದಿದೆ. ತಾತ್ಕಾಲಿಕ ಪರ್ಮಿಟ್ ಅನ್ನು ಶಾಶ್ವತ ಪರ್ಮಿಟ್ ಆಗಿ ಮಾಡಲು ಊರಿನ ಜನತೆ, ಜನಪ್ರತಿನಿಧಿಗಳು ಶ್ರಮಿಸಬೇಕು ಎಂದರು.- ರಫೀಕ್ ಹರೇಕಳ, ಡಿವೈಎಫ್ಐ ಮುಖಂಡ