ಮಂಗಳೂರು, ಡಿ 25(Daijiworld News/MSP):"ಕರಾವಳಿಯಲ್ಲಿ ಶಾಂತಿ ಬಯಸುವ ಮುಸ್ಲಿಂರು ಪಿಎಫ್ಐ, ಕೆಎಫ್ ಡಿಯಂತಹ ಸಂಘಟನೆಯಲಿಲ್ಲ, ಗಲಭೆ ಸೃಷ್ಟಿಸುವ ಇಂತಹ ಸಂಘಟನೆಗಳು ನಿಷೇಧವಾಗಬೇಕು, ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಬೇಕು" ಎಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಡಿ.25 ರ ಬುಧವಾರ ಮಾಧ್ಯಮಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ ಹೇಳಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು, "ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಖಾಸುಮ್ಮನೆ ಸರ್ಕಾರದ ಮೇಲೆ ಆರೋಪ ಹೊರಿಸಿದ್ದಾರೆ. ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವೂ 1600 ಪಿಎಫ್ ಐ ಕ್ರಿಮಿನಲ್ಸ್ ಗಳನ್ನು ಬಿಡುಗಡೆ ಮಾಡಿ ಅವರ ಮೇಲಿದ್ದ ಪ್ರಕರಣಗಳನ್ನು ವಾಪಾಸ್ ಪಡೆದಿದ್ದಾರೆ. ಮೈಸೂರಿನಲ್ಲಿ ಗಲಭೆ ನಡೆದಾಗ ಹಾಕಿದ್ದ 45 ಪ್ರಕರಣಗಳನ್ನು ಸಿದ್ದರಾಮಯ್ಯ ವಾಪಾಸ್ ಪಡೆದರು. ಇದೇ ಕಾರಣಕ್ಕಾಗಿ ಇವತ್ತು ರಾಜ್ಯದಲ್ಲಿ ಮತ್ತೆ ಗಲಭೆ ಆಗಿದೆ. ಈಗ ಹೇಳಿ ಪಿಎಫ್ಐ, ಕೆಎಫ್ ಡಿಯಂತಹ ಸಂಘಟನೆಗಳನ್ನ ಪೋಷಿದವರು ಯಾರು?" ಎಂದು ಪ್ರಶ್ನಿಸಿದರು.
" ಮಂಗಳೂರಲ್ಲಿ ಸಿದ್ದರಾಮಯ್ಯನವರ ಚೇಲಾ, ಶಾಸಕ ಖಾದರ್ ರಾಜ್ಯಕ್ಕೆ ಬೆಂಕಿ ಹಾಕಲು ಹೇಳ್ತಾರೆ. ಮುಖಕ್ಕೆ ಬಟ್ಟೆ ಕಟ್ಟಿ ಮೊದಲ ಬಾರಿಗೆ ರಾಜ್ಯದಲ್ಲಿ ಗಲಭೆ ನಡೆಸಲಾಗಿದೆ, ಸಿದ್ದರಾಮಯ್ಯ ಅಂದು ಬಿಡುಗಡೆ ಮಾಡಿದ ಜನರೇ ಇಲ್ಲಿ ಗಲಭೆ ಮಾಡಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್ ಪ್ರೇರಿತ ಗಲಭೆ ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು" ಎಂದು ಹೇಳಿದರು.
"ಕೇರಳದಿಂದ ಬಂದ ಜನ ಇಲ್ಲಿ ಕುಕೃತ್ಯವೆಸಗಿದ್ದಾರೆ, ಕರಾವಳಿಯಲ್ಲಿ ಅಶಾಂತಿ ವಾತವರಣ ನಿರ್ಮಾಣ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇವೆ. ಪಿಎಫ್ ಐ, ಕೆಎಫ್ ಡಿ ಸಂಘಟನೆಗಳ ಬಗ್ಗೆ ಕೇಂದ್ರ ಸರ್ಕಾರ ಗೃಹ ಇಲಾಖೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಈ ಸಂಘಟನೆಯೂ ಕೇರಳ,ಕರ್ನಾಟಕ ತಮಿಳುನಾಡಿನಲ್ಲಿ ಹೆಚ್ಚು ಸಕ್ರಿಯಾವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಗೃಹ ಇಲಾಖೆಯೂ ಈ ಕುರಿತು ತನಿಖೆ ನಡೆಸಲಿದೆ' ಎಂದು ಹೇಳಿದರು.