ಮಂಗಳೂರು, ಜ 22 : ಕಾಂಗ್ರೆಸ್ ನೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಸ್ಪಷ್ಟಪಡಿಸಿದ್ದಾರೆ. ಅವರು ನಗರ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಸಿಪಿಎಂ, ಸಿಪಿಐ ಪಕ್ಷಗಳು ಮೈತ್ರಿಗೆ ಮುಂದಾದರೆ ಕೆಲ ಸ್ಥಾನಗಳನ್ನು ಬಿಟ್ಟು ಕೊಡಲು ಸಿದ್ಧ ಎಂದರು. ಅಲ್ಲದೆ ಈ ಹಿಂದೆ ರದ್ದಾದ ಶಾಂತಿ ಯಾತ್ರೆ, ಮಂಗಳೂರಿನಲ್ಲಿ ಮತ್ತೆ ನಡೆಸಲು ಅಲೋಚಿಸಿದ್ದೇವೆ ಅಲ್ಲದೆ ಕರಾವಳಿ ಭಾಗದ ಪಕ್ಷದ ಕಾರ್ಯಕರ್ತರಿಗಾಗಿ ಸಮಾವೇಶವನ್ನು ಸಧ್ಯದಲ್ಲೆ ಆಯೋಜಿಸಲಿದ್ದೇವೆ ಎಂದರು.
ಇನ್ನು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದ್ದು ಫೆಬ್ರುವರಿ 3ನೇ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದ ಅವರು, ಚುನಾವಣೆಯ ನಂತರ ಅತಂತ್ರ ಸ್ಥಿತಿ ನಿರ್ಮಾಣವಾದರೂ , ಯಾವುದೇ ಪಕ್ಷಗಳ ಜತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.