ಮಂಗಳೂರು ಜ 21: ಜಿಲ್ಲೆಯಲ್ಲಿ ಆರೇ ತಿಂಗಳು ಕಾರ್ಯ ನಿರ್ವಹಿಸಿ, ದಕ್ಷ ಹಾಗೂ ಖಡಕ್ ಎಸ್.ಪಿ ಅನಿಸಿಕೊಂಡು ಜನರ ಪ್ರೀತಿ ಗಳಿಸಿರುವ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅಕ್ರಮ ಚಟುವಟಿಕೆಗಳು ಹಾಗೂ ಕೋಮು ಸಂಘರ್ಷದ ವಿರುದ್ಧ ಯಾರ ಒತ್ತಡಗಳಿಗೂ ಮಣಿಯದೆ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಖಡಕ್ ಅಧಿಕಾರಿ, ಬಂದು ಇನ್ನು ಆರೇಳು ತಿಂಗಳು ಕಳೆದಿಲ್ಲ. ಆಗಾಲೇ ಅವರನ್ನು ನಿರ್ದಿಷ್ಟ ಕಾರಣಗಳಿಲ್ಲದೆ ಸಹಜ ವರ್ಗಾವಣೆಯ ನೆವ ಹೇಳಿ ಎತ್ತಂಗಡಿ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ವಿರೋಧ ವ್ಯಕ್ತ ವಾಗುತ್ತಿದೆ. ಇದು ಸುಧೀರ್ ರೆಡ್ಡಿ ಅವರ ಕಾರ್ಯವೈಖರಿ ಹಾಗೂ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಶುರುವಾಗಿದೆ 'ವೀ ವಾಂಟ್ ಸುಧೀರ್ ರೆಡ್ಡಿ' ಟ್ವೀಟ್ ಅಭಿಯಾನ
ಸುಧೀರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಿರುವುದನು ವಿರೋಧಿಸಿ ಯುನೈಟೆಡ್ ತುಳುನಾಡು ಸಂಘಟನೆಯೂ 'ವೀ ವಾಂಟ್ ಸುಧೀರ್ ರೆಡ್ಡಿ' - ಸೇವ್ ತುಳುನಾಡ್ , ಹೆಸರಲ್ಲಿ ಟ್ವೀಟ್ ಅಭಿಯಾನ ಆರಂಭಸಿದೆ.ಈ ಅಭಿಯಾನಕ್ಕೆ ಸರ್ಕಾರ ಸಮರ್ಪಕ ರೀತಿಯಲ್ಲಿ ಸ್ಪಂದಿಸದಿದ್ದರೆ , ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.