ಬೆಳ್ತಂಗಡಿ, ಜ 21: ಇಲ್ಲಿನ ನಾರಾವಿಯಲ್ಲೊಂದು ಬಸ್ ನಿಲ್ದಾಣವಿದೆ. ಅದರೆ ಇದು ಅಂತಿಂಥಾ ಬಸ್ ನಿಲ್ದಾಣವಲ್ಲ. ಯಾರಾದರೂ ಸರಿ ಒಂದು ಕ್ಷಣ ಅಲ್ಲಿ ಕುಳಿತು , ದಣಿವಾರಿಸಿ ಮುಂದಿನ ದಾರಿಯೋ, ಅಥವಾ ಬಸ್ ನ್ನೋ ಹಿಡಿಯಬೇಕೆನಿಸುತ್ತದೆ. ಇನ್ನು ಒಂದೇ ನೋಟಕ್ಕೆ ಇದು ಬಡಗುತಿಟ್ಟು ಯಕ್ಷಗಾನದ ಕೇದಗೆ ಮುಂದಲೆಯನ್ನು ಹೋಲುತ್ತದೆ. ಇದರ ಛಾವಣಿ ಅಶ್ವತ್ಥ ಮರ ಎಲೆಯಾಕಾರವನ್ನು ಹೊಂದಿದೆ. ಇನ್ನು ಹೇಳಬೇಕೆಂದರೆ ಇದು ಜರ್ಮನ್ ಮಾದರಿಯ ಬಸ್ ನಿಲ್ದಾಣ ಅಷ್ಟೇ ಅಲ್ಲ ರಾಜ್ಯದಲ್ಲಿ ಮೊದಲನೆಯದು ಕೂಡಾ.
ಜ 21 ರಂದು ಲೋಕಾರ್ಪಣೆಯಾದ ಅತ್ಯಾಧುನಿಕ ಬಸ್ ನಿಲ್ದಾಣ, ನಾರಾವಿಯ ರಾಮೆರೆಗುತ್ತು ಕುಟುಂಬದ ನಿರಂಜನ ಅಜ್ರಿ ಅವರ ಶ್ರಮದ ಫಲ. ಇವರು ತಮ್ಮ ತಂದೆ ಎನ್.ಮಂಜಪ್ಪ ಅತಿಕಾರಿ ಹಾಗೂ ತಾಯಿ ಮಿತ್ರವತಿ ಅವರ ನೆನಪಿನಲ್ಲಿ 12 ಲಕ್ಷ ವೆಚ್ಚದಲ್ಲಿ ಈ ಜರ್ಮನ್ ಮಾದರಿಯ ತಂಗುದಾಣವನ್ನು ನಿರ್ಮಿಸಿದ್ದಾರೆ. ತಮ್ಮ ಮಗಳು ಪ್ರತೀಕ್ಷಾ ಮತ್ತು ಅಳಿಯ ಜರ್ಮನ್ ದೇಶದಲ್ಲಿ ಉದ್ಯೋಗದಲ್ಲಿದ್ದು ಅಲ್ಲಿ ಹಾಗೂ ಇತರ ದೇಶಗಳಿಗೆ ಪ್ರವಾಸಿಕ್ಕೆಂದು ಹೋದಾಗ ಅಲ್ಲಿನ ತಂಗುದಾಣದ ವ್ಯವಸ್ಥೆಯನ್ನು ಕಂಡು ಅಜ್ರಿಯವರು ಮನಸೋತಿದ್ದರು. ನಗರಗಳಲ್ಲಿ ವ್ಯವಸ್ಥಿತವಾದ ಬಸ್ ನಿಲ್ದಾಣವಿರುತ್ತದೆ. ಅದರೆ ಹಳ್ಳಿಗರಿಗೆ ಇಂತಹ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ ಎಂದು ಮನಗಂಡು ತಮ್ಮೂರಿನಲ್ಲಿಯೇ ವಿನೂತನ ಬಸ್ ನಿಲ್ದಾಣ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದಾರೆ.
ತಂಗುದಾಣದ ಸ್ಪೆಷಾಲಿಟಿ
ಜರ್ಮನಿ ಮಾದರಿಯ ಈ ತಂಗುದಾಣದಲ್ಲಿ ಕುಡಿಯಲು ಶುದ್ದ ತಂಪು ನೀರು, ಸೋಲಾರ್ ದೀಪಗಳು, ಸಿಸಿ ಟಿವಿ, ರಾಜ್ಯದ ಮ್ಯಾಪ್, ಬಸ್ಸುಗಳ ವೇಳಾಪಟ್ಟಿ, ಫ್ಯಾನ್ ವ್ಯವಸ್ಥೆ, ಎಫ್.ಎಂ ರೇಡಿಯೋ, ನೋಟಿಸ್ ಬೋರ್ಡ್, ಗಡಿಯಾರ , ಕಸದ ಬುಟ್ಟಿ, ಎಲ್.ಇ.ಡಿ ಬೋರ್ಡ್ ಎಲ್ಲವೂ ಇಲ್ಲಿದೆ. ೧೫*೧೫ ಅಳತೆ ಈ ತಂಗುದಾಣದಲ್ಲಿ ಪುಟ್ಟ ಉದ್ಯಾನವನವೂ ಇದ್ದು ಪ್ರಯಾಣಿಕರ ಮನಸ್ಸನ್ನು ಉಲ್ಲಾಸವಾಗಿಡುತ್ತದೆ. ಇಡೀ ತಂಗುದಾಣಕ್ಕೆ ಎರಡೇ ಎರಡು ಕಂಬಗಳು ಆಧಾರ ಸ್ಥಂಬ್ತಗಳಿದ್ದು ಎಲ್ಲರನ್ನು ಸೆಳೆಯುವಂತಿದೆ.