ಮಣಿಪಾಲ, ಡಿ 24 (Daijiworld News/PY) : ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳಿಗೆ ಇನ್ನೂ ಒಂದು ತಿಂಗಳುಗಳ ಕಾಲ ಚಿಕಿತ್ಸೆ ಅಗತ್ಯ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ ಮತ್ತು ವೈದ್ಯರ ತಂಡ, ಶ್ರೀಗಳಿಗೆ ಉಸಿರಾಟದ ತೊಂದರೆ ಉಂಟಾದ ಕಾರಣ ಅವರ ಆರೋಗ್ಯದ ಚೇತರಿಕೆಗಾಗಿ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದೆ, ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ನಿಧಾನಗತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಚೇತರಿಕೆಗೆ ಹೆಚ್ಚಿನ ಸಮಯ ತಗಲಬಹುದು ಎಂದು ಹೇಳಿದ್ದಾರೆ.
ಶ್ರೀಗಳಿಗೆ ನ್ಯೂಮೋನಿಯಾ ಆಗಿದ್ದರಿಂದ ಶ್ವಾಸಕೋಶದಲ್ಲಿ ಸೋಂಕು ಆಗಿದೆ. ಆಸ್ಪತ್ರೆಗೆ ದಾಖಲಿಸಿದ ದಿನಕ್ಕೆ ಹೋಲಿಸಿದರೆ ಕೊಂಚ ಚೇತರಿಕೆಯಾಗಿದೆ. ಕಫದ ಸಮಸ್ಯೆ ಕಡಿಮೆಯಾಗುತ್ತಿದ್ದು, ವಯಸ್ಸಾದ ಕಾರಣ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಶ್ರೀಗಳು ಉಸಿರಾಡಲು ಪ್ರಯತ್ನಿಸುತ್ತಿದ್ದು, ವೆಂಟಿಲೇಟರ್ನಲ್ಲಿ ಇನ್ನೂ ಸಾಕಷ್ಟು ಸಮಯ ಇರಿಸಬೇಕಾಗಬಹುದು ಎಂದರು.
ಶ್ರೀಗಳ ಆರೋಗ್ಯದ ದೃಷ್ಟಿಯಿಂದ ವಿಐಪಿ, ಭಕ್ತರು ಆಸ್ಪತ್ರೆಗೆ ಬಾರದಿದ್ದರೆ ಒಳ್ಳೆಯದು, ಗಣ್ಯರು ಬಂದಾಗಲೆಲ್ಲಾ ಐಸಿಯು ಬಾಗಿಲು ತೆರೆಯಬೇಕಾಗುತ್ತದೆ ಇದರಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಎಂದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ.
ಶ್ರೀಗಳ ಚಿಕಿತ್ಸೆಗಾಗಿ ಬೆಂಗಳೂರಿನ ತಜ್ಞ ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದೆ. ಹೊಸದಿಲ್ಲಿಯ ಏಮ್ಸ್ನ ವೈದ್ಯರ ತಂಡ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಗಳ ಆರೋಗ್ಯ ವಿಚಾರಿಸಲು ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದರು.