ಬಂಟ್ವಾಳ, ಜ 22: ಬಂಟ್ವಾಳದ ಇರಾ ಗ್ರಾಮದಲ್ಲಿ ಚಿರತೆಯೊಂದು ಕಂಡುಬಂದಿದ್ದು, ಜೆಸಿಬಿ ಆಪರೇಟರ್ ಓರ್ವರಿಗೆ ಕಾಣಸಿಕ್ಕ ಚಿರತೆಯಿಂದ ಇದೀಗ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇರಾ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನದ ಗುಡ್ಡ ಸಮೀಪ ಜೆಸಿಬಿ ಮೂಲಕ ಜಾಗ ಸಮತಟ್ಟುಗೊಳಿಸಲಾಗುತಿತ್ತು. ಕೆಲಸದ ನಡುವೆ ಜೆಸಿಬಿಯಿಂದ ಇಳಿದ ಆಪರೇಟರ್ ಜಾಗ ಪರಿಶೀಲನೆ ನಡೆಸಲು ಮುಂದಾಗುತ್ತಿದ್ದಂತೆ ಕೆಲ ಮೀ.ಅಂತರದಲ್ಲಿ ಚಿರತೆ ಕಂಡುಬಂದಿತ್ತು. ಬಾಯ್ತೆರೆದು ಚಿರತೆ ಘರ್ಜಿಸುವುದನ್ನು ಕಂಡ ಆಪರೇಟರ್ ಸ್ಥಳದಿಂದ ಓಡಿ ಪಾರಾಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಅದರಂತೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ಸ್ಥಳಕ್ಕೆ ಜನ ಬಂದಾಗ ಚಿರತೆ ಕಂಡುಬಂದಿರಲಿಲ್ಲ. ಅರಣ್ಯ ಇಲಾಖೆಗೆ ಪಂಚಾಯತ್ ವತಿಯಿಂದ ಮಾಹಿತಿ ನೀಡಲಾಗಿದ್ದು, ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಲವು ತಾಸುಗಳವರೆಗೆ ಗುಡ್ಡಪ್ರದೇಶದಲ್ಲಿ ಹುಡುಕಾಡಿದರೂ ಚಿರತೆ ಸುಳಿವು ಸಿಕ್ಕಿಲ್ಲ. ಬೆಳ್ತಂಗಡಿಯ ವೇಣೂರು ಭಾಗದಲ್ಲಿ ಇಲಾಖೆಯ ಎರಡು ಗೂಡುಗಳನ್ನು ಇರಿಸಿರುವುದರಿಂದ ಮುಂದೆ ಇರಾ ಪ್ರದೇಶದಲ್ಲಿ ಕಂಡು ಬಂದಲ್ಲಿ ಅಲ್ಲಿಂದ ಗೂಡನ್ನು ಇರಾ ಕ್ಕೆ ಸ್ಥಳಾಂತರಿಸುವುದಾಗಿ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.