ಉಡುಪಿ, ಡಿ 23 (DaijiworldNews/SM): ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಮಣಿಪಾಲ ಆಸ್ಪತ್ರೆಗೆ ತೆರಳಿದ ಬಿಷಪ್ ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳು ಶೀಘ್ರವಾಗಿ ಗುಣಮುಖರಾಗಬೇಕು. ನಾವು ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದೇವೆ. ಶೀಘ್ರ ಅವರು ಗುಣಮುಖರಾಗಿ ಶ್ರೀ ಕೃಷ್ಣಮಠದಲ್ಲಿ ಪೂಜೆ ಮಾಡುವಂತಾಗಲಿ ಎಂದರು.
ಶ್ರೀಗಳ ಆರೋಗ್ಯ ಮರಳಿ ಬಂದು ಅವರು ಮೊದಲಿನಂತೆ ಆಗಬೇಕು. ಏಳು ವರ್ಷಗಳಿಂದ ಅವರ ಜೊತೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇವೆ ಎಂದು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.