ವರದಿ: ಯಶೋಧರ ವಿ.ಬಂಗೇರ
ಮೂಡುಬಿದಿರೆ,ಡಿ 23(Daijiworld News/MSP): ತುಳುನಾಡಿನ ಜನಪದ ಕ್ರೀಡೆಯಾದ ಕಂಬಳಕ್ಕೆ ಇತಿಹಾಸ ಪ್ರಸಿದ್ಧ ಜೈನಕಾಶಿ ಮೂಡುಬಿದಿರೆಯಲ್ಲಿ ಚರಿತ್ರೆಯನ್ನು ನೆನಪಿಸುವ, ಉಳಿಸುವ ಕೈಂಕರ್ಯಕ್ಕೆ ಸಾಕ್ಷಿಯಾಗುತ್ತಿದೆ. ಪ್ರಸಕ್ತ ವರ್ಷದ ಕಂಬಳದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆಯ ಲೋಕಾರ್ಪಣೆಗೊಳ್ಳುತ್ತಿರುವುದು, ಅದರೊಂದಿಗೆ ಕಂಬಳ ಕ್ರೀಡೆಯ ಸಾಧಕರನ್ನು ನೆನಪಿಸುವಂತಹ ಕೆಲಸವನ್ನು ಮಾಡುತ್ತಿರುವುದು ಹಾಗೂ ಕಂಬಳ ಸಹಿತ ಜನಪದ ಕ್ರೀಡೆಗಳಿಗೆ ಸುಸಜ್ಜಿತ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿರುವುದರ ಮುಖೇನ ಕಂಬಳಕ್ಕೆ ಐತಿಹಾಸಿಕ ಮೆರಗು ನೀಡುವ ಕೆಲಸವನ್ನು ಮೂಡುಬಿದಿರೆ ಕಂಬಳ ಸಮಿತಿ ಮಾಡುತ್ತಿದೆ.
ಲೋಕಾರ್ಪಣೆ ಸಿದ್ದಗೊಂಡಿರುವ ರಾಣಿ ಅಬ್ಬಕ್ಕ ಪ್ರತಿಮೆ
ಅಬ್ಬಕ್ಕ ರಾಣಿಯ ಮೊದಲ ಪ್ರತಿಮೆ:
ಮೂಡುಬಿದಿರೆ ಕಂಬಳ ಪ್ರಾರಂಭಿಸುವಾಗ, ಮೂಡುಬಿದಿರೆಯಲ್ಲಿ 16 ವರ್ಷದ ಹಿಂದೆಯೇ ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯುವ ಕಡಲಕೆರೆ ನಿಸರ್ಗಧಾಮದ ಪ್ರದೇಶಕ್ಕೆ ವೀರರಾಣಿ ಅಬ್ಬಕ್ಕ ಸಾಂಸ್ಕೃತಿಕ ಗ್ರಾಮವೆಂದು ನಾಮಕರಣ ಮಾಡಲಾಗಿದ್ದು, ಮೂಡುಬಿದಿರೆ ಮಣ್ಣಿನ ಮಗಳನ್ನು ನೆನಪಿಸುವಂತಹ ಕೆಲಸವಾಗಿದೆ. ಪೂರ್ಚುಗೀಸರ ವಿರುದ್ಧ ಹೋರಾಡಿದ ಚೌಟ ರಾಣಿ ಅಬ್ಬಕ್ಕದೇವಿಯ ಪ್ರತಿಮೆ ಈ ಬಾರಿ ಕಂಬಳದಲ್ಲಿ ಮುಖ್ಯಮಂತ್ರಿ ಲೋಕಾರ್ಪಣೆಗೊಳ್ಳಲಿಸಲಿದ್ದಾರೆ. ಕಂಬಳ ವೇದಿಕೆಯ ಬಲಬದಿಯಲ್ಲಿ ಸುಮಾರು ರೂ.8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಯು ಆಕರ್ಷಣೀಯವಾಗಿದೆ. ಈ ಪ್ರತಿಮೆಯು ಮೂಡುಬಿದಿರೆ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಅಬ್ಬಕ್ಕಳ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಂಬಳ, ಜನಪದ ಕ್ರೀಡೆಗೆ ಮ್ಯೂಸಿಯಂ: ಕಂಬಳದ ಸಮಗ್ರ ಮಾಹಿತಿಯನ್ನು ಒಳಗೊಂಡಂತೆ, ಕಂಬಳಕ್ಕೆ ಬಳಸುವ ಪರಿಕರಗಳು, ಛಾಯಾಚಿತ್ರಗಳು, ಕಂಬಳ ಸಾಧಕರ ಮಾಹಿತಿ, ದಾಖಲೆಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕಡಲಕೆರೆಯಲ್ಲಿರುವ ಕಂಬಳಕರೆಯ ಪಕ್ಕ ಮ್ಯೂಸಿಯಂ ಅನ್ನು ನಿರ್ಮಿಸುವ ಚಿಂತನೆಯನ್ನು ಮೂಡುಬಿದಿರೆ ಕಂಬಳ ಸಮಿತಿ ಮಾಡುತ್ತಿದೆ. ಇದರೊಂದಿಗೆ ಕೃಷಿ ಬದುಕು, ತುಳುನಾಡಿನ ಸಂಸ್ಕೃತಿ ಗ್ರಾಮವನ್ನು ಬಿಂಬಿಸುವ ಸಲುವಾಗಿ ರಾಣಿ ಸಂಸ್ಕೃತಿ ಗ್ರಾಮವನ್ನು ಅರ್ಥಪೂರ್ಣವಾಗಿ ರೂಪಿಸುವ ಯೋಜನೆ ಕೂಡ ಸಮಿತಿಯ ಮುಂದಿದೆ. ಕಂಬಳ ಸಾಧಕರ ಹಾಗೂ ಕಂಬಳ ಮಾಹಿತಿಗಳನ್ನು ಒಳಗೊಂಡತೆ ಪುಸ್ತಕ ಪ್ರಕಟಣೆಗೂ ಚಿಂತನೆ ನಡೆಯುತ್ತಿದೆ.
ಕಂಬಳ ಸಾಧಕರ ಪರಿಚಯ: ಮೂಡುಬಿದಿರೆ ಕಂಬಳ ಸಮಿತಿಯು ಈ ಬಾರಿ ಹೊಸತೊಂದು ಪ್ರಯತ್ನಕ್ಕೆ ಹೆಜ್ಜೆ ಇಡುತ್ತಿದೆ. ಕಂಬಳ ಕ್ಷೇತ್ರದ ಹಿರಿಯ ಕಿರಿಯ ಸಾಧಕರನ್ನು ಪರಿಚಯಿಸುವ ನಿಟ್ಟಿನಲ್ಲಿ ಕಂಬಳ ನಡೆಯುವ ಸಂದರ್ಭ ಬೃಹತ್ ಎಲ್ಇಡಿ ಪರದೆಯಲ್ಲಿ ಅವರ ಭಾವಚಿತ್ರ ಸಹಿತ ಸಾಧನೆಯ ವಿವರಗಳನ್ನು ಪ್ರಸ್ತುತಪಡಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ಪೂರ್ವಭಾವಿ ತಯಾರಿಗಳಾಗಿವೆ.