ಮಂಗಳೂರು, ಡಿ 23(Daijiworld News/MSP): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಗೋಲಿಬಾರ್ ನಡೆಯುತ್ತದೆ. ಯಡಿಯೂರಪ್ಪ ಸರ್ಕಾರದ್ದಾಗಲೇ ಯಾಕೆ ಗೋಲೀಬಾರ್ ಆಯಿತು? ಈ ಹಿಂದೆ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದರು, ಈಗ ಮಂಗಳೂರಿನಲ್ಲಿ ಅಮಾಯಕರ ಮೇಲೆ ಗೋಲಿಬಾರ್ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗೋಲಿಬಾರ್ ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹಾಗೂ ಪರಿಹಾರ ನೀಡಿದ ಬಳಿಕ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಿದ್ದರಾಮಯ್ಯ ಅವರು, ಪ್ರತಿಭಟನೆ ಸಂವಿಧಾನ ಕೊಟ್ಟಿರುವ ಹಕ್ಕು, ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿಲ್ಲ, ಪೌರತ್ವ ವಿರೋಧಿ ಪ್ರತಿಭಟನೆ ದೇಶದಾದ್ಯಂತ ನಡೀತಾ ಇದೆ ಹೀಗಿರುವಾಗ
ರಾಜ್ಯವ್ಯಾಪಿ 144 ಸೆಕ್ಷನ್ ಹಾಕುವ ಅಗತ್ಯವೇ ಇರಲಿಲ್ಲ. ಮಂಗಳೂರಿನಲ್ಲಿ ನಡೆದ ಘಟನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಯಿ ನೇರ ಹೊಣೆ ಎಂದು ಕಿಡಿಕಾರಿದರು.
ಶೋಭಾ ಕರಂದ್ಲಾಜೆಗೇನು ಕೆಲಸ?
ವಿರೋಧ ಪಕ್ಷದ ನಾಯಕನಿಗೆ ಮಂಗಳೂರಿಗೆ ಬರದಂತೆ ತಡೆ ಹಾಕಿಲಾಯಿತು. ನಮ್ಮನ್ನು ಮಂಗಳೂರಿಗೆ ಬರೆದಂತೆ ತಡೆದ ಯಡಿಯೂರಪ್ಪನವರು, ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಲೇ ಬಂದಿರುವ ಶೋಭಾ ಕರಂದ್ಲಾಜೆ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗಿದ್ದೇಕೆ ? ಅವರಿಗೆ ಇಲ್ಲಿ ಕೆಲಸವೇನಿತ್ತು. ಮುಖ್ಯಮಂತ್ರಿಗಳು, ಗೃಹ ಸಚಿವರು ಬಂದು ಹೋದಾಗ ಸಂಸದೆ ಶೋಭಾ ಕರಂದ್ಲಾಜೆ ಬಂದು ಇಲ್ಲಿ ಹೇಳಿಕೆ ಕೊಟ್ಟಿದ್ದು ಹೇಗೆ ? ಶೋಭಾ ಕರಂದ್ಲಾಜೆ ಯಾರು,ಆಕೆ ಏನು ಮಂಗಳೂರು ಪ್ರತಿನಿಧಿಯೇ ಎಂದು ಪ್ರಶ್ನಿಸಿದರು.