ಮಂಗಳೂರು, ಡಿ 23 (Daijiworld News/MB) : "ಪೊಲೀಸರ ಗೋಲಿಬಾರ್ನಿಂದಾಗಿ ಇಬ್ಬರು ಮೃತಪಟ್ಟ ಘಟನೆಯನ್ನು ಸಿಐಡಿಗೆ ವಹಿಸಿರುವುದು ಸರಿಯಲ್ಲ, ಈ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕು" ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಇಂದು ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, "ಸಿಎಂ ಯಾವಾಗಲೂ ಸುಳ್ಳನ್ನೇ ಹೇಳುತ್ತಾರೆ. ಅವರೇ ಈ ಪ್ರಕರಣಕ್ಕೆ ಸಂಬಂಧಿಸಿ ಸರ್ಟಿಫಿಕೇಟ್ ನೀಡುತ್ತಾರೆ. ಪೊಲೀಸರಿಗೂ ಅವರೇ ಸರ್ಟಿಫಿಕೇಟ್ ಕೊಡ್ತಾರೆ. ಈ ಪ್ರಕರಣದಲ್ಲಿ ಗೋಲಿಬಾರ್ ಮಾಡಿದವರು ಪೋಲಿಸರು, ಹಾಗೆಯೇ ಸಿಐಡಿಯಲ್ಲಿ ತನಿಖೆ ಮಾಡುವವರು ಪೊಲೀಸರೇ. ಆ ಕಾರಣದಿಂದಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಈ ಪ್ರಕರಣವನ್ನು ಸಿಐಡಿಗೆ ನೀಡೋಕೆ ಮುಖ್ಯಮಂತ್ರಿ ಯಡಿಯೂರಪ್ಪ ಏನು ಐ ವಿಟ್ನೆಸ್ಸಾ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಪೊಲೀಸ್ ಠಾಣೆಗೆ ದಾಳಿ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ ಕಾರಣಕ್ಕೆ ಗೋಲಿಬಾರ್ ನಡೆಸಿದ್ದಾರೆ ಎಂದು ಹೇಳಿದ ಕುರಿತು ಪ್ರಶ್ನಿಸಿದಾಗ "ನಾನು ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಘಟನೆ ನಡೆದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯಲ್ಲ, ಹಾಗಿದ್ದರೂ ಅವರು ಈ ರೀತಿಯ ಹೇಳಿಕೆಗಳನ್ನು ಹೇಗೆ ನೀಡುತ್ತಾರೆ?" ಎಂದು ಕೇಳಿದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ "ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ" ಎಂಬ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ "ತೇಜಸ್ವಿಯವರಿಗೆ ಬಡವರು ಮತ್ತು ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅಕ್ಷರ ಅರಿಯದ ಬಡತನದಲ್ಲಿ ಕೂಲಿ ಮಾಡುವವರ ಬಗ್ಗೆ ಅವರಿಗೆ ತಿಳಿದಿಲ್ಲ. ಅವರು ಆರ್ಎಸ್ಎಸ್ನವರು ಅವರಿಂದ ನಾವು ಇನ್ನೇನು ಬಯಸಲು ಸಾಧ್ಯ" ಎಂದು ತಿರುಗೇಟು ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯಲ್ಲಿ ಬಾಬರಿ ಮಸೀದಿಯ ಪ್ರತಿ ದಹನ ಮಾಡಿದ ಕುರಿತ ಪ್ರಶ್ನೆಗೆ ಉತ್ತರಿಸಿ, "ಪ್ರಭಾಕರ ಭಟ್ ಅವರು ಈ ಪ್ರದೇಶದ ಮುಖ್ಯಮಂತ್ರಿಯಿದ್ದಂತೆ. ಸರಕಾರವನ್ನು ಹತೋಟಿಯಲ್ಲಿ ಇಡುವವರು ಇವರು. ಅವರು ನೀಡಿದಂತಹ ಪ್ರಚೋದನಕಾರಿ ಭಾಷಣದಂತೆ ಬೇರೆ ಯಾರು ಭಾಷಣ ಮಾಡಿಲ್ಲ.ಅವರ ವಿರುದ್ಧ ದೂರು ದಾಖಲಾಗಬೇಕು. ಈಗಾಗಲೇ ಎಫ್ಐಆರ್ ಆಗಿದ್ದು ಅವರ ಬಂಧನ ಮಾಡಬೇಕು" ಎಂದು ಹೇಳಿದ್ದಾರೆ.
ಆ ಬಳಿಕ ಸಿದ್ಧರಾಮಯ್ಯರವರು ಗುಂಡೇಟಿಗೆ ಬಲಿಯಾದವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ ಅವರ ನೇತೃತ್ವದಲ್ಲಿ 5 ಲಕ್ಷ ರೂಪಾಯಿ ಹಾಗೂ ಜಿಲ್ಲಾ ಕಾಂಗ್ರೆಸ್ನಿಂದ 2.5 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡಿ, ಬಳಿಕ ಗೋಲಿಬಾರ್ ನಡೆದ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಬಿ ರಮನಾಥ ರೈ, ಯು.ಟಿ ಖಾದರ್, ಶಾಸಕರಾದ ಈವನ್ ಡಿಸೋಜ, ಹರೀಶ್ ಕುಮಾರ್, ಕಾರ್ಪೋರೇಟರ್ಗಳಾದ ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಜಿಎ ಬಾವ, ಲತೀಫ್ ಕಂದಕ್, ಡಿ ಎಂ ಅಸ್ಲಂ ಉಪಸ್ಥಿತರಿದ್ದರು.