ಪುತ್ತೂರು ಜ 21: ಕೆಮ್ಮಿಂಜೆಯಲ್ಲಿರುವ ಕ್ಯಾಂಪ್ಕೋ ಚಾಕ್ಲೆಟ್ ಫ್ಯಾಕ್ಟರಿ ಅವರಣದಲ್ಲಿ ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೌಲಭ್ಯ ಸೌಧವನ್ನು ಜ 21 ರ ಭಾನುವಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದರು. ಇದೇ ವೇಳೆ ಸುರೇಶ್ ಪ್ರಭು ಮಾತನಾಡಿ, ರೈತರು ಬೆಳೆದ ಬೆಳೆಗಳನ್ನು ಅವರೇ ರಪ್ತು ಮಾಡಲು ಸಹಾಯವಾಗುವಂತಹ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಲು ತೀರ್ಮಾನಿಸಿದೆ, ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಕ್ಯಾಂಪ್ಕೋ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಹಾಗೂ ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಸಿ ಸುಬ್ರಾಯ ಭಟ್ ಅವರ ಪ್ರತಿಮೆಯನ್ನು, ಸಹಕಾರ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ಜ್ಯೋತೀಂದ್ರ ಬಾಯಿ ಮೆಹ್ತಾ ಅನಾವರಣಗೊಳಿಸಿದರು. ಇದೇ ವೇಳೆ ಕಾವುನಲ್ಲಿ ನಿರ್ಮಾಣಗೊಳ್ಳುವ ಬೃಹತ್ ಗೋದಾಮಿಗೆ ಸಂಸದ ನಳೀನ್ ಕುಮಾರ್ ಕಟೀಲು ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.