ಮಂಗಳೂರು ಡಿ 23(Daijiworld News/MSP): ನಗರದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂ ಹಿಂಪಡೆಯಲಾಗಿದೆ. ಎರಡು ದಿನಗಳ ಕಾಲ ಕರ್ಫ್ಯೂ ಹೇರಿಕೆಯಿಂದ ನಲುಗಿ ಹೋಗಿದ್ದ ಮಂಗಳೂರು ಜನಜೀವನ ಸಾಮಾನ್ಯ ಸ್ಥಿತಿಗೆ ಹಿಂತಿರುಗುತ್ತಿದೆ.
ಶಾಲಾ- ಕಾಲೇಜುಗಳು ಆರಂಭವಾಗಿವೆ. ಬಸ್, ಆಟೋ , ಬಸ್ಗಳು ಎಂದಿನಂತೆ ರಸ್ತೆಗಿಳಿದಿವೆ. ಮಾರುಕಟ್ಟೆಯಲ್ಲಿ ಅಂಗಡಿಗಳು ಬಾಗಿಲು ತೆರೆದಿದ್ದು ವ್ಯಾಪಾರ ವಹಿವಾಟು ಆರಂಭವಾಗಿದೆ.
ಇನ್ನು ನಗರದಾದ್ಯಂತ ಕರ್ಫ್ಯೂ ಹಿಂಪಡೆಯಲಾಗಿದ್ದರೂ, ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಗುಂಪು ಸೇರಲು ಹಾಗೂ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕರ್ಫ್ಯೂ ಹಿಂಪಡೆಯಲಾಗಿದ್ದರೂ ಪೊಲೀಸ್ ಬಿಗಿಬಂದೋಬಸ್ತ್ ಮುಂದುವರಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ನಗರದಲ್ಲಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.