ಮಧ್ಯಪ್ರದೇಶ: ನೋಟು ಮುದ್ರಣಾಲಯದಿಂದಲೇ, ಹಿರಿಯ ಅಧಿಕಾರಿಯೊಬ್ಬ ಹಣ ಕಳ್ಳತನ ಮಾಡಿ ಬಂಧನಕ್ಕೆ ಒಳಗಾದ ಘಟನೆ ಮಧ್ಯಪ್ರದೇಶದ ದೇವಸ್ನಲ್ಲಿ ನಡೆದಿದೆ. ಕಳ್ಳತನ ಮಾಡಿದ ಹಿರಿಯ ಅಧಿಕಾರಿಯನ್ನು ಮನೋಹರ್ ವರ್ಮಾ ಎಂದು ಗುರುತಿಸಲಾಗಿದ್ದು ಸುಮಾರು 90 ಲಕ್ಷ ರೂ. ಹಣ ಕಳ್ಳತನ ಮಾಡಿದ ಆರೋಪ ಇತನ ಮೇಲಿದೆ. ಆದರೆ ಇನ್ನೊದೆಡೆ ಮನೋಹರ್ ವರ್ಮಾ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ನಿಯೋಜಿತ ಅಧಿಕಾರಿಯಲ್ಲ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.
ನೋಟು ಮುದ್ರಣಾಲಯಕ್ಕೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ರಕ್ಷಣೆ ಒದಗಿಸುತ್ತಿದ್ದು, ವರ್ಮಾ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನ ಸಿಐಎಸ್ಎಫ್ ಸಿಬ್ಬಂದಿ ಗಮನಿಸಿದ್ದಾರೆ. ಇದರಿಂದ ಆತನ ಮೇಲೆ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.
ಕಳೆದ ಗುರುವಾರದಿಂದ ವರ್ಮಾರನ್ನ ಸಿಸಿಟಿವಿಯಲ್ಲಿ ಗಮನಿಸುತ್ತಾ ಬಂದಾಗ , ಸಣ್ಣ ಪುಟ್ಟ ಲೋಪ ದೋಷಗಳಿಂದ ತಿರಸ್ಕೃತಗೊಂಡ ನೋಟುಗಳನ್ನು ಜೋಡಿಸಿಡುತ್ತಿದ್ದ ಮರದ ಬಾಕ್ಸ್ ಬಳಿ ವರ್ಮಾ ಆಗಾಗ ಹೋಗಿ ನಿಲ್ಲುತ್ತಿದ್ದುದ್ದು ಸಿಐಎಸ್ಎಫ್ ಅನುಮಾನ ಮೂಡಿಸಿತ್ತು. ಅಲ್ಲದೆ ಶುಕ್ರವಾರ ಬೆಳಗ್ಗೆ ಅನುಮಾನಸ್ಪದವಾಗಿಯೇ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ತಡಮಾಡದೇ ವರ್ಮಾನನ್ನು ಹಿಡಿದು ತಪಾಸಣೆ ಮಾಡಿದಾಗ 200 ಹಾಗೂ 500 ರೂ. ನೋಟಿನ ಕಂತೆಗಳನ್ನ ಬಟ್ಟೆ ಹಾಗೂ ಶೂನಲ್ಲಿ ಬಚ್ಚಿಟ್ಟುಕೊಂಡಿದ್ದು ಗೊತ್ತಾಗಿದೆ.
ವರ್ಮಾ ಕಚೇರಿಯಲ್ಲುಇ 26.09 ಲಕ್ಷ ರೂ. ಹೊಸ ನೋಟಿನ ಕಂತೆಗಳು ಸಿಕ್ಕಿವೆ. ಅಲ್ಲದೆ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಶೋಧಿಸಿದಾಗ ದಿಂಬು, ಹಾಸಿಗೆ ಮತ್ತು ಬಾತ್ರೂಮಿನಲ್ಲಿ ಒಟ್ಟು 64.50 ಲಕ್ಷ ರೂ. ಪತ್ತೆಯಾಗಿದೆ. ಎಲ್ಲಾ ನೋಟುಗಳು ಹೊಸದಾಗಿ ಮುದ್ರಣವಾದುದಾಗಿವೆ. ಕೆಲವುಗಳಲ್ಲಿ ಸಣ್ಣ ಡ್ಯಾಮೇಜ್ ಆಗಿದ್ದು, ತಿರಸ್ಕೃತವಾಗಿದ್ದವು. ವರ್ಮಾ ಹಿರಿಯ ಅಧಿಕಾರ ಸ್ಥಾನದಲ್ಲಿದ್ದು, ಅಧಿಕಾರಿಗಳನ್ನ ತಪಾಸಣೆ ಮಾಡಲಾಗುತ್ತಿರಲಿಲ್ಲ ಎಂದು ಸಿಐಎಸ್ಎಫ್ ಹೇಳಿದೆ.