ಮಂಗಳೂರು, ಡಿ 22 (DaijiworldNews/SM): ದಿನವಿಡಿ ಸಡಿಲಿಕೆಯಿದ್ದ ಕರ್ಫ್ಯೂ ನಗರದಲ್ಲಿ ಮತ್ತೆ ಮುಂದುವರೆದಿದೆ. ಸಂಜೆ ಆರು ಗಂಟೆಯಿಂದ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸೋಮವಾರ ಬೆಳಗ್ಗೆಯ ತನಕ ಮಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಶನಿವಾರದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿರುವಂತೆ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ರವಿವಾರದಂದು ಕಡಲ ನಗರಿಯ ಜನ ಬೆಳಗ್ಗಿನಿಂದಲೇ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂಗಡಿ ಮುಂಗಟ್ಟುಗಳು, ಹೋಟೇಲ್ ಗಳು ಎಂದಿನಂತೆ ಕಾರ್ಯಚರಿಸಿದ್ದವು. ಜನತೆ ಅಗತ್ಯ ಸಾಮಾಗ್ರಿಗಳ ಖರೀಧಿಗೆಂದು ಮಾರುಕಟ್ಟೆಗಳಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕರು ಸಂಜೆಯೊಳಗೆ ತಮ್ಮ ಕಾರ್ಯಗಳನ್ನು ಮುಗಿಸಿದ್ದಾರೆ.
ಸಂಜೆ ಆರು ಗಂಟೆಯಾಗುತ್ತಿದ್ದಂತೆ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ದಿನವಿಡಿ ತೆರೆದಿದ್ದ ಅಂಗಡಿಗಳು, ಮಳಿಗೆಗಳನ್ನು ಸಂಜೆ ಆರು ಗಂಟೆಯಾಗುತ್ತಿದ್ದಂತೆ ವ್ಯಾಪಾರಿಗಳು ಬಂದ್ ಮಾಡಿದರು. ಹಾಗೂ ಕೆಲವೆಡೆ ಪೊಲೀಸರು ಬಂದ್ ಮಾಡುವಂತೆ ಸೂಚನೆ ನೀಡಿದರು.
ಸಂಜೆ ಆರು ಗಂಟೆಯ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಜನ ಸಂಚಾರ, ವಾಹನಗಳ ಸಂಚಾರ ವಿರಳಗೊಂಡಿದೆ. ನಗರದಲ್ಲಿ ಜನರ ಓಡಾಟವಿಲ್ಲದೆ ಸ್ತಬ್ದಗೊಂಡಿದೆ.