ಮಂಗಳೂರು, ಡಿ 22 (Daijiworld News/MB) : ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾತ್ಮಾಕ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವರನ್ನು ವಜಾ ಮಾಡಬೇಕು. ಹಾಗೆಯೇ ಈ ಘಟನೆಯ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು 24 ಗಂಟೆಗಳಲ್ಲಿ ಜೈಲಿಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ನಗರದ ಪೊಲೀಸರು ಹೇಳಿಕೆಗಳನ್ನು ತಿರುಚುವ ಮೂಲಕ ಸುಳ್ಳು ಹೇಳುತ್ತಿದ್ದಾರೆ. ಹಾಗೆಯೇ ಗೋಲಿಬಾರ್ನಲ್ಲಿ ಮೃತಪಟ್ಟವರ ಮೇಲೆ ಎಫ್ಐಆರ್ ದಾಖಲು ಮಾಡಿರುವುದು ಎಷ್ಟು ಸರಿ? ಇದು ಅನಾಗರಿಕ ವರ್ತನೆ. ಈ ಹಿನ್ನಲೆಯಲ್ಲಿ ಇನ್ಸ್ಪೆಕ್ಟರ್ ಶಾಂತರಾಮ್ ಕುಂದರ್ ಮೇಲೆ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.
"ಕರ್ನಾಟಕವು ಶಾಂತಿಯಿಂದ ಇತ್ತು. ಆದರೆ ಈಗ ಪ್ರತಿಭಟನೆಗಳು ನಡೆಯುತ್ತಿದೆ. 19ರಂದು ಪ್ರತಿಭಟನೆ ನಡೆಸಲು ಎಸ್ಕೆ ಎಸ್ ಎಸ್ ಎಫ್ ಹಾಗೂ ಎಸ್ಎಫ್ಎಫ್ ಸಂಘಟನೆತಗಳು ಅನುಮತಿ ಪಡೆದಿದ್ದರು. ಆದರೆ ಏಕಾಏಕಿಯಾಗಿ 18ರಂದೇ ನಿಷೇದಾಜ್ಞೆ ಜಾರಿಮಾಡಲಾಗಿದೆ. ಅಧಿಕಾರಿಗಳು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಆದೇಶ ಪಾಲಿಸುತ್ತಾರ ಅಥವಾ ಸರಕಾರದ ಆದೇಶ ಪಾಲಿಸುತ್ತಾರ ?" ಎಂದು ಪ್ರಶ್ನಿಸಿದರು.
"ನನ್ನ 14 ತಿಂಗಳ ಆಡಳಿತವಧಿಯಲ್ಲಿ ಈ ರೀತಿ ಹಿಂಸೆ ನಡೆದಿಲ್ಲ. ಈ ಸರಕಾರ ಮನುಷ್ಯತ್ವ ಇಲ್ಲದ ಸರಕಾರ. ಆಡಳಿತ ವ್ಯವಸ್ಥೆಯೇ ಸರಿಯಿಲ್ಲ. ರಾಜ್ಯಕ್ಕೆ ಗೃಹ ಸಚಿವರೇ ಇಲ್ಲದಂತಾಗಿದೆ. ಗೃಹ ಸಚಿವರು ತನ್ನ ಸ್ಥಾನಕ್ಕೆ ಅಸಮರ್ಥರು, ಅವರನ್ನು ವಜಾ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವರು ಹೊಣೆ ಎಂದು ಹೇಳುತ್ತಿದ್ದ ಬಿಜೆಪಿ ಈಗ ಈ ಇಬ್ಬರ ಸಾವಿಗೆ ಯಾರು ಹೊಣೆ ಎಂದು ಹೇಳುತ್ತೀರಿ. ಗೃಹ ಸಚಿವರೇ ಅಥವಾ ಪ್ರಧಾನ ಮಂತ್ರಿಯೇ?" ಎಂದು ಕೇಳಿದ್ದಾರೆ.
"ಬಿಜೆಪಿ ಈ ಘಟನೆಗೆ ಸಂಬಂಧಿಸಿ ಖಾದರ್ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರಿಂದಾಗಿ ಈ ಹಿಂಸೆ ನಡೆದಿದೆ, ಅವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು ಎಂದು ಹೇಳುತ್ತಿದೆ. ಹಾಗದರೆ ಈ ಮೊದಲು ಬಿಜೆಪಿಯ ನಾಯಕರುಗಳು ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದಾರೆ, ಅವರ ವಿರುದ್ಧ ಎಫ್ಐಆರ್ ದಾಖಲು ಆಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ಮಂಗಳೂರಿಗೆ ಭೇಟಿ ನೀಡಿದ ಯಡಿಯೂರಪ್ಪ ಆಸ್ಪತ್ರೆಯಲ್ಲಿ ದಾಖಲಾದವರನ್ನು ಭೇಟಿ ಮಾಡಲೇ ಇಲ್ಲ. ಇನ್ನು ಈ ಪ್ರತಿಭಟನೆಯಲ್ಲಿ ಕೇರಳದವರು ಇದ್ದರು ಎಂದು ಹೇಳಲಾಗುತ್ತಿದೆ. ಆದರೆ ಅವರು ಪ್ರತಿಭಟನೆಯಲ್ಲಿ ಇರುತ್ತಿದ್ದರೆ ಆಸ್ಪತ್ರೆಯಲ್ಲಿ ಇರುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಕೇರಳ ಮೂಲದವರು ಯಾರು ಈ ಗೋಲಿಬಾರ್ ವೇಳೆ ಗಾಯಗೊಂಡು ದಾಖಲಾಗಿಲ್ಲ" ಎಂದು ತಿಳಿಸಿದ್ದಾರೆ.
"ಇನ್ನೂ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಲುಗಳಿಗೆ ಸರಕಾರ ಪರಿಹಾರ ನೀಡುತ್ತದೆಯೇ ಎಂದು ತಿಳಿದಿಲ್ಲ. ಆದರೆ ಅವರಿಗೆ ಪರಿಹಾರ ನೀಡುವ ಕುರಿತು ಜೆಡಿಎಸ್ ಚರ್ಚೆ ನಡೆಸುವುದು" ಎಂದು ಹೇಳಿದ್ದಾರೆ.