ಮಂಗಳೂರು, ಡಿ 22 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾತ್ಮಾಕ ಪ್ರತಿಭಟನೆಯಲ್ಲಿ ನಡೆದ ಗೋಲಿಬಾರ್ನಿಂದಾಗಿ ಮೃತಪಟ್ಟ ಇಬ್ಬರ ವಿರುದ್ಧ ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರ ಗುಂಡಿನ ದಾಳಿಯಿಂದಾಗಿ ಕಂದಕ್ ನಿವಾಸಿ ಅಬ್ದುಲ್ ಜಲೀಲ್ ಹಾಗೂ ಕುದ್ರೋಳಿ ನಿವಾಸಿ ನೌಶೀನ್ ಸಾವನ್ನಪ್ಪಿದ್ದು ಈ ಇಬ್ಬರು ಸೇರಿದಂತೆ ಒಟ್ಟು 29 ಜನರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದ್ದು ಪ್ರಕರಣದಲ್ಲಿ ಜಲೀಲ್ 3ನೇ ಆರೋಪಿಯಾಗಿ ಹಾಗೂ ನೌಶೀನ್ 8ನೇ ಆರೋಪಿ ಎಂದು ಉಲ್ಲೇಖ ಮಾಡಲಾಗಿದೆ.
ಈ ಗೋಲಿಬಾರ್ಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಡಿಸೆಂಬರ್ 19 ರಂದು ಮಾಧ್ಯಮದವರೊಂದಿಗೆ ಮಾತನಾಡಿ "6,000 ರಿಂದ 7,000 ಪ್ರತಿಭಟನಾಕಾರರು ಬಂದರ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು ಎಂದು ತಿಳಿಸಿದ್ದರು. ಆದರೆ ಈಗ ಬಂದರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್ಐಆರ್ನಲ್ಲಿ " 1,500 ರಿಂದ 2,000 ಪ್ರತಿಭಟನಾಕಾರರು ಬಂದರ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು" ಎಂದು ನಮೂದಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಣ ಠಾಣೆಯಲ್ಲಿ ದಾಖಲು ಮಾಡಲಾದ ಇನ್ನೊಂದು ಎಫ್ಐಆರ್ನಲ್ಲಿ 45 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಈವರೆಗೆ ಒಟ್ಟು ೭ ಎಫ್ಐಆರ್ಗಳನ್ನು ದಾಖಲು ಮಾಡಲಾಗಿದ್ದು ಇದರಲ್ಲಿ 400 ಜನರ 'ಅಪರಿಚಿತರನ್ನು' ಸಹ ಆರೋಪಿಗಳೆಂದು ದಾಖಲಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಸ್ತಾಪಿಸಿರುವ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಹಾಗೂ ಎಫ್ಐಆರ್ನಲ್ಲಿರುವ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದ್ದು ದಿನ ಕಳೆದಂತೆ ಘಟನೆಯನ್ನು ತಿರುಚಲಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬಂದರ್ ಪೊಲೀಸ್ ಠಾಣೆಯಲ್ಲಿ ಗುಂಡಿನ ದಾಳಿಗೆ ಬಲಿಯಾದ ಇಬ್ಬರನ್ನು ಪ್ರತಿಭಟನೆ ನಡೆಸಿದ ಗುಂಪಿನಲ್ಲಿ ಇದ್ದವರು ಎಂದು ಹೇಳಲಾಗಿದೆ. ಆದರೆ ಪ್ರತ್ಯಕ್ಷದರ್ಶಿಗಳು ಹೇಳಿದ ಹೇಳಿಕೆಯಂತೆ ಇಬ್ಬರು ಪ್ರತಿಭಟನಾಕಾರರಲ್ಲ, ಜಲೀಲ್ ಶಾಲೆಯಿಂದ ವಾಪಾಸ್ ಆಗುತ್ತಿದ್ದ ತನ್ನ ಮಕ್ಕಳಿಗಾಗಿ ಕಾಯುತ್ತಿದ್ದ ಹಾಗೂ ನೌಶೀನ್ ಕೂಲಿ ಕೆಲಸ ಮಾಡಿ ಕೆಲಸದ ನಂತರ ಮನೆಗೆ ವಾಪಾಸ್ ಆಗುತ್ತಿದ್ದರು. ಇದನ್ನು ಈಗಾಗಲೇ ಹಲವಾರು ಮಾಧ್ಯಮಗಳು ವರದಿ ಮಾಡಿದೆ.
ಬಂದರ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾದ ಎಫ್ಐಆರ್ನಲ್ಲಿ "ಡಿ.19ರ ಸಂಜೆ ಸುಮಾರು 4.15 ರಿಂದ 5.30 ಗಂಟೆಗೆ, ಸುಮಾರು 1,500 ರಿಂದ 2,000 ಪ್ರತಿಭಟನಾಕಾರರು ಪೊಲೀಸರನ್ನು ಹತ್ಯೆ ಮಾಡುವ ಸಲುವಾಗಿ ಬಂದರ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಅವರ ಬಳಿ ಮಾರಕ ಆಯುಧಗಳು ಇದ್ದವು. ಈ ಪ್ರತಿಭಟನಾಕಾರರು ಪಿಎಫ್ಐ ಮತ್ತು ಎಸ್ಡಿಪಿಐ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಸದಸ್ಯರು"ಎಂದು ಹೇಳಲಾಗಿದೆ.
"ಪ್ರತಿಭಟನಕಾರರು ಪೊಲೀಸ್ ಠಾಣೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಹಾಗೂ ಅಧಿಕಾರಿ ಸಿಬ್ಬಂದಿಗಳು ಪ್ರತಿಭಟನಾ ಗುಂಪಿಗೆ ಚದುರುವಂತೆ ಹೇಳಿದ್ದು ಪ್ರತಿಭಟನಕಾರರು ಕಲ್ಲು ತೂರಾಟ ಮಾಡುತ್ತಲ್ಲೇ ಇದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಇಬ್ಬರು ಗಾಯಗೊಂಡರು. ಆಸ್ಪತ್ರಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ. ಇನ್ನೂ ಕೆಲವು ಪ್ರತಿಭಟನಕಾರರಿಗೆ ಗಾಯಗಳಾಗಿವೆ. ಆರೋಪಿಗಳು ಪೊಲೀಸರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದಲ್ಲದೇ ಪೊಲೀಸರನ್ನು ಹತ್ಯೆ ಮಾಡುವ ಯತ್ನ ಮಾಡಿದ್ದಾರೆ" ಎಂದು ನಮೂದಿಸಲಾಗಿದೆ.
ಈ ಕುರಿತು ಮಾಧ್ಯಮವು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದು ಅವರು ಸಂಪರ್ಕಕ್ಕೆ ದೊರೆತಿಲ್ಲ.