ಉಡುಪಿ, ಡಿ 21 (DaijiworldNews/SM): ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ವಿಚಾರಣೆಗೆ ಗಣ್ಯಾತೀಗಣ್ಯರ ದಂಡು ಆಸ್ಪತ್ರೆಯತ್ತ ದೌಡಾಯಿಸಿದೆ. ಶನಿವಾರದಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಹಲವು ರಾಜಕೀಯ ನಾಯಕರು ಆಸ್ಪತ್ರೆಯತ್ತ ತೆರಳಿದ್ದಾರೆ. ಆಸ್ಪತ್ರೆಯ ವೈದ್ಯರು ಹೇಳುವಂತೆ ಶ್ರೀಗಳ ಆರೋಗ್ಯದಲ್ಲಿ ಶನಿವಾರದಂದು ಚೇತರಿಕೆ ಉಂಟಾಗಿದೆ. ಶುಕ್ರವಾರಕ್ಕಿಂತ ಶನಿವಾರ ಚಿಕಿತ್ಸೆಗೆ ಉತ್ತಮ ಸ್ಪಂದಿಸಿದ್ದಾರೆ ಎಂದಿದ್ದಾರೆ. ಈ ನಡುವೆ ಜಾತಿ ಧರ್ಮ, ಪಕ್ಷ ಬೇಧ ಮರೆತು ನಾಯಕರು ಶ್ರೀಗಳ ಭೇಟಿಗೆ ತೆರಳುತ್ತಿದ್ದಾರೆ. ಆ ಮೂಲಕ ಎಲ್ಲಾ ವರ್ಗದವರಲ್ಲಿ ಶ್ರೀಗಳು ಉತ್ತಮ ಸೌಹಾರ್ದ ಸಂಬಂಧವನ್ನು ಹೊಂದಿದ್ದರು ಎಂಬುವುದನ್ನು ಎತ್ತಿ ತೋರಿಸುತ್ತದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಸಚಿವ ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಯು.ಟಿ. ಖಾದರ್, ಸಿ.ಎಂ. ಇಬ್ರಾಹಿಂ, ಎಂ ಎಲ್ ಸಿ ಐವನ್ ಡಿಸೋಜ, ಸೇರಿದಂತೆ ಹಲವು ಗಣ್ಯರು ಶನಿವಾರದಂದು ಆಸ್ಪತ್ರೆಗೆ ತೆರಳಿ ಶ್ರೀಗಳ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ್ದಾರೆ. ಶ್ರೀಗಳು ಶೀಘ್ರ ಗುಣಮುಖರಾಗಿ ಮತ್ತೆ ಶ್ರೀಕೃಷ್ಣ ಮಠದಲ್ಲಿ ತಮ್ಮ ಪೂಜಾ ಕಾರ್ಯಗಳನ್ನು ಆರಂಭಿಸಲಿ ಎಂದು ಮುಖಂಡರು ಪ್ರಾರ್ಥಿಸಿಕೊಂಡಿದ್ದಾರೆ.