ಮಂಗಳೂರು, ಡಿ 21 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಿಂದ ಪೊಲೀಸರ ಗೋಲಿಬಾರ್ಗೆ ಇಬ್ಬರು ಬಲಿಯಾಗಿ ಉದ್ವಿಗ್ನಗೊಂಡಿದ್ದ ಮಂಗಳೂರಿನಲ್ಲಿ ಶನಿವಾರ ಮಧ್ನಾಹ್ನದ ಬಳಿಕ ಕರ್ಪ್ಯೂ ಸಡಿಲಿಕೆಯ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.
ಹಿಂಸಾಚಾರದ ಪ್ರತಿಭಟನೆಯಿಂದ ಪ್ರಕ್ಷುಬ್ದಗೊಂಡಿದ್ದ ಮಂಗಳೂರಿನಲ್ಲಿ ಕರ್ಪ್ಯೂ ಹೇರಿ, ಇಂಟರ್ ನೆಟ್ ಸೇವೆಯೂ ಇಲ್ಲದೆ ಗೃಹಬಂಧಿಗಳಾಂತಾಗಿದ್ದ ಮಂಗಳೂರು ಜನತೆಗೆ ಶನಿವಾರ ಮಧಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿರುವುದು ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕರ್ಪ್ಯೂ ಸಡಿಲಿಕೆ ಮಾಹಿತಿ ಹರಡುತ್ತಿದ್ದಂತೆ ತರಕಾರಿ ಹಾಲು ಕೆಲವು ದಿನಸಿ ಅಂಗಡಿಗಳು ತೆರೆದಿದ್ದು, ಈ ಹಿನ್ನಲೆಯಲ್ಲಿ ಜನ ಅಗತ್ಯ ವಸ್ತುಗಳಿಗಾಗಿ ಅಂಗಡಿ -ಮುಂಗಟ್ಟುಗಳಿಗೆ ಮುಗಿಬಿದ್ದು ಖರೀದಿಸುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿ ಕಂಡುಬಂತು. ಕೆಲ ಅಂಗಡಿಗಳಿಗೆ ಜನ ಏಕಾಏಕಿ ಮುಗಿಬಿದ್ದ ಪರಿಣಾಮ ಒಮ್ಮೆಲೆ ಸಾಮಾನುಗಳು ಬಿಕರಿಯಾಯಿತು.
ವ್ಯಾಪಾರ, ವಹಿವಾಟು ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದು, ವಿರಳ ವಾಹನ ಸಂಚಾರವಿದ್ದು ಬಿಗು ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.