ಮಂಗಳೂರು, ಡಿ 21 (Daijiworld News/MSP): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆ ಹಿಂಸಾತ್ಮಕ ಘಟನೆಯ ಬಳಿಕ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿರುವ ಕುಟುಂಬಕ್ಕೆ ಸಿ.ಎಂ ಬಿ.ಎಸ್ ಯುಡಿಯೂರಪ್ಪ ಪರಿಹಾರ ಘೋಷಣೆ ಮಾಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಟಿ ನಡೆಸಿದ ಸಿಎಂ ಬಿ.ಎಸ್ ಯುಡಿಯೂರಪ್ಪ" ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ಕುಟುಂಬಸ್ಥರ ಜತೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಅವರ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಸಾಂತ್ವಾನ ಹೇಳಿದ್ದೇನೆ. ಬೆಂಗಳೂರಿನಲ್ಲಿ ನಾನು ಮುಸ್ಲಿಂ ಮುಖಂಡರೊಂದಿಗೆ ನಾನು ಮಾತನಾಡಿ ಮನವರಿಕೆ ಮಾಡುವ ಕೆಲಸ ಮಾಡಿದ್ದೇನೆ. ಆದರೆ ಮಂಗಳೂರಿನಲ್ಲಿ ಕಾನೂನು ಕೈಗೆತ್ತಿಕೊಂಡ ಹಿನ್ನೆಲೆ ಇಂತಹ ಘಟನೆ ನಡೆದಿದೆ"ಎಂದರು.
"ಜಿಲ್ಲೆಯ ಹಿಂದೂ ಮುಸ್ಲಿಂ, ಕ್ರೈಸ್ತ ಮುಖಂಡರು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ಪ್ಯೂ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿ ಡಿ.22 ಭಾನುವಾರ ಮುಂಜಾನೆ 6 ರಿಂದ ಸಂಜೆ 6 ರವರೆಗೆ ಕರ್ಪ್ಯೂ ಹಿಂದಕ್ಕೆ ಪಡೆದು, ಡಿ.22 ರ ರಾತ್ರಿ ಮಾತ್ರ ಜಾರಿಗೊಳಿಸುವಂತೆ ಸೂಚಿಸಿದ್ದೇನೆ. ಡಿ.23 ರಿಂದ ಕ್ರಿಸ್ಮಸ್ ಸಮೇತ ಹಬ್ಬಹರಿದಿನಗಳನ್ನು ಆಚರಿಸಲು ಅನುಮಾಡಿಕೊಡುವ ನಿಟ್ಟಿನಲ್ಲಿ ಕರ್ಪ್ಯೂ ಸಂಪೂರ್ಣ ಹಿಂಪಡೆಯಲಾಗುವುದು, ಆದರೆ ನಿಷೇಧಾಜ್ಞೆ ಮುಂದುವರಿಯಲಿದೆ" ಎಂದು ಹೇಳಿದರು.
ಇನ್ನು ಕೇರಳದ ಪತ್ರಕರ್ತರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ, ’ಕೇರಳದಿಂದ ಬಂದ ಪತ್ರಕರ್ತರ ಬಳಿ ಗುರುತು ಚೀಟಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದೇನೆ ’ ಎಂದು ಹೇಳಿದರು.