ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, 17 ಮಂದಿ ಸಜೀವ ದಹನವಾದ ಘಟನೆ ಜ 20 ರ ಶನಿವಾರ ರಾತ್ರಿ ಸಂಭವಿಸಿದೆ. ದೆಹಲಿಯ ಉತ್ತರ ಭಾಗದಲ್ಲಿರುವ ಭವನಾ ಕೈಗಾರಿಕಾ ಪ್ರದೇಶದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದ್ದು ಘಟನೆಯಿಂದ 17 ಮಂದಿ ಸಾವನಪ್ಪಿದರೆ, ಇಬ್ಬರು ಗಾಯಗೊಂಡಿದ್ದಾರೆ.
ಎರಡು ಮಹಡಿಯ ಕಾರ್ಖಾನೆಯಲ್ಲಿ ಪಟಾಕಿಗಳನ್ನು ದಾಸ್ತುನು ಇರಿಸಲಾಗಿತ್ತು. ಆದರೆ ಇದ್ದಕ್ಕಿದಂತೆ ನಿನ್ನೆ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಕಟ್ಟಡಕ್ಕೆ ಅವರಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದ ಒಳಗೆ ಸಿಲುಕಿದ್ದ 10 ಮಂದಿ ಮಹಿಳೆಯರು, 7 ಮಂದಿ ಪುರುಷರು ಸಾವನ್ನಪ್ಪಿದ್ದಾರೆ.
ಇನ್ನು ಕಾರ್ಖಾನೆಯಲ್ಲಿ ಸುರಕ್ಷಿತ ನಿಯಮಗಳು ಪಾಲಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಇದರಿಂದಾಗಿ ಸಿಲುಕಿಹಾಕಿಕೊಂಡವರು ತಪ್ಪಿಸಿಕೊಳ್ಳಲಾಗಲಿಲ್ಲ. ಅಲ್ಲದೆ ಕೆಲವರು ಕಿಟಕಿಯಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.ಕಾರ್ಯಾಚರಣೆ ವೇಳೆ ನೆಲಮಹಡಿಯಲ್ಲಿ 4 ಮೃತದೇಹ, ಮೊದಲನೇ ಮಹಡಿಯಲ್ಲಿ 13 ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು.