ಮಂಗಳೂರು, ಡಿ 21 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯು ಹಿಂಸಾರೂಪ ಪಡೆದ ಬಳಿಕ ಕರ್ಫ್ಯೂ ವಿಧಿಸಲಾಗಿದ್ದು ಮಂಗಳೂರಿನಲ್ಲಿ ಪರಿಸ್ಥಿತಿಯು ಹತೋಟಿಗೆ ಬರುತ್ತಿದೆ. ಶನಿವಾರ ಕಾನೂನು ಸುವ್ಯವಸ್ಥೆ ಅವಲೋಕಿಸಿ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸುತ್ತಿರುವುದರಿಂದ ನಗರದಾದ್ಯಂತ ಪೊಲೀಸ್ ಸರ್ಪಗಾವಲು ಮತ್ತಷ್ಟು ಬಿಗಿಗೊಂಡಿದೆ.
ಸಧ್ಯ ಎರಡು ದಿನಗಳ ಹಿಂದೆ ಪ್ರಕ್ಷುಬ್ಧವಾಗಿದ್ದ ಮಂಗಳೂರು ನಿಶಬ್ದವಾಗಿದ್ದು ಕರ್ಫ್ಯೂ ಮುಂದುವರಿದಿದೆ. ಜನ ಸಾಮಾನ್ಯರು ದಿನಬಳಕೆ ವಸ್ತುಗಳನ್ನು ಖರೀದಿಸಲೆಂದು ಶನಿವಾರ ಮುಂಜಾನೆ 6 ಗಂಟೆಯಿಂದ 8 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಆ ಬಳಿಕ ಎಂಟು ಗಂಟೆಯ ನಂತರ ಮತ್ತೆ ಕರ್ಫ್ಯೂ ಹೇರಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು.
ಯಾವುದೇ ವಾಹನ ಸಂಚಾರ ಹಾಗೂ ಜನರ ಓಡಾಟವಿಲ್ಲದೇ ನಗರ ಬಿಕೋ ಎನ್ನುತ್ತಿದ್ದು ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನೊಂದೆಡೆ ರೈಲು ಹಾಗೂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಟ್ಯಾಕ್ಸಿ ವಾಹನ ಸಿಗದೆ ಪರದಾಡಿದರು.
ಇನ್ನು ಕೆಲವೆಡೆ ಕರ್ಫ್ಯೂ ಹೇರಿದ ಬಳಿಕವೂ ರಸ್ತೆಯಲ್ಲಿ ಜನರು ಓಡಾಡುತ್ತಿದ್ದ ಕಾರಣ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ವರದಿಯಾಗಿದೆ.