ಮಣಿಪಾಲ, ಡಿ 21 (Daijiworld News/PY) : ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಶನಿವಾರ ಬೆಳಿಗ್ಗೆ ಕರೆ ಮಾಡಿ ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೇಜಾವರ ಶ್ರೀಗಳು ದೇವರಂತ ವ್ಯಕ್ತಿ, ಅಂತಂಹ ವ್ಯಕ್ತಿ ಲಕ್ಷಕ್ಕೊಬ್ಬರು ಮಾತ್ರ ಈ ಭೂಮಿಯಲ್ಲಿ ಮತ್ತೆ ಜನಿಸಿ ಬರುತ್ತಾರೆ. ಶೀಘ್ರವೇ ಅವರು ಗುಣಮುಖರಾಗುವಂತೆ ಪ್ರಾರ್ಥಿಸುವುದು ಇಡೀ ಸಮಾಜದ ಕರ್ತವ್ಯ ಎಂದರು.
ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ತುರ್ತು ಸಹಾಯ ಬೇಕಾದಲ್ಲಿ ತಿಳಿಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಪೇಜಾವರ ಶ್ರೀಗಳ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು, "ಗುರುಗಳು ಆಸ್ಪತ್ರೆಗೆ ಸೇರುವ ವೇಳೆಗಿಂತ ಈಗ ಸುಮಾರು 30 ರಿಂದ 40 ಶೇಕಡಾ ಸುಧಾರಣೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇನ್ನೂ ಕೂಡಾ ಅಪಾಯದಿಂದ ಹೊರಗೆ ಬಂದಿಲ್ಲ. ಇನ್ನೂ ಮೂರರಿಂದ ನಾಲ್ಕು ದಿನಗಳ ಕಾಲ ನಿಗಾ ಘಟಕದಲ್ಲಿ ಇರುತ್ತಾರೆ. ಶ್ರೀಗಳ ಆರೋಗ್ಯದ ಕುರಿತಂತೆ ಸಾರ್ವಜನಿಕರು ವದಂತಿಗಳಿಗೆ ಕಿವಿ ಕೊಡದೆ ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಬೇಕು" ಎಂದರು.