ಮಂಗಳೂರು, ಡಿ 20 (DaijiworldNews/SM): ಗುರುವಾರದಂದು ಗಲಭೆಯಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ಮಂಗಳೂರು ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷಾ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ಶುಕ್ರವಾರದಂದು ಸಹಜ ಸ್ಥಿತಿಗೆ ಮರಳಿದೆ. ನಗರದಲ್ಲಿ ಶುಕ್ರವಾರದಂದು ಯಾವುದೇ ಗಲಭೆಗಳು ನಡೆದಿಲ್ಲ. ನಗರದಲ್ಲಿ ಡಿಸೆಂಬರ್ 22ರ ತನಕ ಕರ್ಫ್ಯೂ ಮುಂದುವರಿಸಲಾಗಿದೆ ಎಂದರು.
ಡಿಸೆಂಬರ್ 22ರ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲಾ ಧರ್ಮಗಳು ನಗರದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಗುರುವಾರದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಡಾ.ಪಿ ಎಸ್ ಹರ್ಷ ತಿಳಿಸಿದ್ದಾರೆ.
ಇನ್ನು ಶುಕ್ರವಾರದಂದು ನಗರದಲ್ಲಿ ಕರ್ಫ್ಯೂ ವಿಧಿಸಿದ ಪರಿಣಾಮ ಮಹಾನಗರ ಶಾಂತವಾಗಿತ್ತು. ಜನ ಸಂಚಾರವಿಲ್ಲದೆ ನಗರ ಬಿಕೋ ಎನ್ನುತ್ತಿತ್ತು. ನಗರಕ್ಕೆ ಜನ ತೆರಳದಂತೆ ಪೊಲೀಸರು ತಡೆದ ಘಟನೆ ನಡೆಯಿತು. ಇದರಿಂದಾಗಿ ಶುಕ್ರವಾರದಂದು ಶಾಂತವಾಗಿತ್ತು.