ಬಂಟ್ವಾಳ, ಡಿ 20 (DaijiworldNews/SM): ರಾಷ್ಟೀಯ ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಉಪ್ಪಿನಂಗಡಿಯಲ್ಲಿ 2 ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ದ.ಕ.ಜಿಲ್ಲಾ ಎಸ್ಪಿ ಲಕ್ಷೀಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರ ಬಂಟ್ವಾಳ ಐಬಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುರುವಾರ ರಾತ್ರಿ ಅರ್ಕುಳದಲ್ಲಿ ವೊಲ್ವೋ ಹಾಗೂ ಕೆಎಸ್ಆರ್ಟಿಸಿ ಕೆಂಪು ಬಸ್ಸಿಗೆ ಕಲ್ಲು ಬಿದ್ದಿರುವ ಪ್ರಕರಣ ನಡೆದಿದೆ. ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳದಲ್ಲಿ 4 ಕೆಎಸ್ಆರ್ಪಿ, 2 ಟಿಯರ್ ಪಾರ್ಟಿ, ಚಿಕ್ಕಮಗಳೂರು ಜಿಲ್ಲೆಯಿಂದ 50 ಪೊಲೀಸ್ ಸಿಬ್ಬಂದಿ ಜತೆಗೆ 4 ಮಂದಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.
ತಾನು ಬಂಟ್ವಾಳ ತಾಲೂಕಿನಲ್ಲಿ ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದು, ಕೈಕಂಬ, ಕಲ್ಲಡ್ಕ, ವಿಟ್ಲ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಪುತ್ತೂರಿನಲ್ಲಿ ಹೆಚ್ಚುವರಿ ಎಸ್ಪಿ ವಿಕ್ರಂ ಅಮಟೆ ಅವರು ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದರು ಎಂದರು.
ಇನ್ನು ಬಿ.ಸಿ.ರೋಡು, ಕೈಕಂಬ, ಮೆಲ್ಕಾರ್, ಕಲ್ಲಡ್ಕ, ವಿಟ್ಲ ಸಹಿತ ಕೆಲವು ಪ್ರಮುಖ ನಗರಗಳಲ್ಲಿ ಭಾಗಶಃ ಅಂಗಡಿಗಳು ಬಂದ್ ಅಗಿದ್ದವು. ಮಧ್ಯಾಹ್ನದ ಬಳಿಕ ಎಲ್ಲ ನಗರ ಪ್ರದೇಶಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಪೊಳಲಿ ಸಮೀಪದ ಅಡ್ಡೂರಿನಲ್ಲಿ ಮಂಗಳೂರಿಗೆ ಹೊರಡುತ್ತಿದ್ದ ವಾಹನಗಳನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಜನ ಜಮಾಯಿಸಿ, ಕೆಲ ಕ್ಷಣ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜನ ಸಂಚಾರ ವಿರಳವಾಗಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಖಾಸಗಿ ಬಸ್ ಗಳು ದಿನವಿಡೀ ಸಂಚಾರ ಸ್ಥಗಿತ ಗೊಳಿಸಿದ್ದರೆ, ಕೆ.ಎಸ್.ಅರ್.ಟಿ.ಸಿ.ಬಸ್ ಸಂಜೆ ಬಿ.ಸಿ.ರೋಡ್ ವರೆಗೆ ಮಾತ್ರ ಸಂಚರಿಸಿದವು. ಬಂಟ್ವಾಳದಲ್ಲಿ ಬೆಳಿಗ್ಗೆ ಕೆಲವರು ಅಂಗಡಿಗಳನ್ನು ಬಂದ್ ಮಾಡುವಂತೆ ಒತ್ತಡ ಹೇರಿದವರನ್ನು ಪೊಲೀಸರು ವಾಪಾಸು ಕಳುಹಿಸಿದ್ದಾರೆ. ಉಳಿದಂತೆ ಶಾಂತಿಗಾಗಿ ಸ್ವಯಂಪ್ರೇರಿತವಾಗಿ ಕೆಲವು ಅಂಗಡಿಗಳು ಬಂದ್ ಮಾಡಿದ್ದರು.