ಮಂಗಳೂರು, ಡಿ 20 (Daijiworld News/PY) : ಗುರುವಾರ ನಡೆದ ಹಿಂಸಾಚಾರದ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ ಮೃತಪಟ್ಟ ಇಬ್ಬರ ಮೃತದೇಹಗಳ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ನಡೆಸಲಾಯಿತು.
ಬಂದರ್ ಕಂದುಕದ ಅಬ್ದುಲ್ ಜಲೀಲ್ ಅವರ ಮೃತದೇಹವನ್ನು ಝೀನತ್ ಬಕ್ಷ್ ಮಸೀದಿ ಆವರಣದಲ್ಲಿ ಹಾಗೂ ಕುದ್ರೋಳಿಯ ನೌಶಿರ್ ಮೃತದೇಹವನ್ನು ಕುದ್ರೋಳಿ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಯಿತು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಮೃತದೇಹಗಳನ್ನು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹಾಗೂ ಮಂಗಳೂರಿನ ತಹಶೀಲ್ದಾರ ಗುರು ಪ್ರಸಾದ್ ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶಾಂತಿಯುತವಾದ ಮೆರವಣಿಗೆಯ ಮೂಲಕ ಮೃತದೇಹಗಳೊಂದಿಗೆ ಮಸೀದಿಗೆ ತಲುಪಿದ ಮೃತರ ಬಂಧುಗಳು ಹಾಗೂ ಆಪ್ತರು ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ಮೃತ ಶರೀರಕ್ಕೆ ಅಂತಿಮ ಪ್ರಾರ್ಥನೆ ಸಲ್ಲಿಸಿದ ನಂತರ ವಿಧಿ ವಿಧಾನಗಳ ಬಳಿಕ ದಫನ ಮಾಡಲು ಕೊಂಡೊಯ್ಯಲಾಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.