ಮಂಗಳೂರು, ಡಿ 20 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ಹಿಂಸಾಚಾರ ಇಬ್ಬರ ಬಲಿಗೆ ಸಾಕ್ಷಿಯಾದ ಮಂಗಳೂರಿನಲ್ಲಿ ಇಂದೂ ಕರ್ಫ್ಯೂ ಮುಂದುವರಿದಿದೆ.
ಇನ್ನು ಹಿಂಸಾಚಾರಕ್ಕೆ ನಿಯಂತ್ರಿಸಲೆಂದು ಪೊಲೀಸರು ಹಾರಿಸಿದ ಗುಂಡಿಗೆ ನೌಸೀನ್ (23) ಮತ್ತು ಜಲೀಲ್ ಕುದ್ರೋಳಿ (49) ಮೃತಪಟ್ಟಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಇಂದು ಶುಕ್ರವಾರವಾಗಿರುವ ಕಾರಣ ಮಸೀದಿಯಲ್ಲಿ ನಮಾಜು ಹಾಗೂ ಪ್ರಾರ್ಥನೆ ಸಲ್ಲಿಸಲು ಮಧ್ಯಾಹ್ನ ೧೨ ಗಂಟೆಯಿಂದ ೨ ಗಂಟೆಯವರೆಗೆ ಕರ್ಪ್ಯೂ ಸಡಿಲಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಪೊಲೀಸ್ ಆಯುಕ್ತರು ಪ್ರಾರ್ಥನೆ ಸಲ್ಲಿಸಲು ಎರದು ಗಂಟೆಗಳ ಕಾಲಾವಕಾಶ ನೀಡಿದ್ದಾರೆ ,ಹೀಗಾಗಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಗುರುವಾರ ನಡೆದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಯಾವುದೇ ಮುಂಜಾಗ್ರತ ಕ್ರಮವಾಗಿ ಪ್ರತಿಭಟನೆ ನಡೆಯದಂತೆ ನೋಡಿಕೊಳ್ಳಲು ನಗರದಲ್ಲಿ ಪೊಲೀಸರು ಕಣ್ಗಾವಲಿರಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯ, ಖಾಸಗಿ ಸಾರಿಗೆ ವ್ಯವಸ್ಥೆ ರದ್ದಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಜನರು ದಿನನಿತ್ಯದ ಸಾಮಾನುಗಳನ್ನು ಖರೀದಿಸಲು ಮುಂದಾದಾಗ ಪೊಲೀಸರು ರಸ್ತೆಗೆ ಇಳಿಯಲು ಬಿಡದ ಸನ್ನಿವೇಶ ಕಂಡುಬಂದಿದೆ. ಅಲ್ಲದೇ ಗಲಭೆ ಪೀಡಿತ ಪ್ರದೇಶಗಳಾದಂತಹ ಬಂದರು, ಕುದ್ರೋಳಿಗಳಂತಹ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಮೊಯಿದ್ದೀನ್ ಬಾವಾ, ಯು.ಟಿ ಖಾದರ್, ಬಿ.ಎಂ.ಫಾರೂಕ್ , ಐವನ್ ಡಿಸೋಜಾ ಮುಂತಾದವರು ಪಾರ್ಥಿವ ಶರೀರವಿರಿಸಿದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.