ಮಂಗಳೂರು, ಡಿ 19 (DaijiworldNews/SM): ನಗರದಲ್ಲಿ ನಡೆದಿರುವ ಗಲಭೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ನಗರದ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕರ್ನಾಟಕಕ್ಕೆ ಯಾವುದೇ ಆತಂಕವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮಹಾನಗರದ ಜನತೆ ಶಾಂತಿಯನ್ನು ಕಾಪಾಡಬೇಕು. ಶಾಂತಿ ಸುವ್ಯವಸ್ಥೆ, ನೆಮ್ಮದಿಯ ಜೀವನಕ್ಕೆ ಅವಕಾಶ ನೀಡಬೇಕು ಎಂದು ಮಹಾನಗರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಸೌಹಾರ್ದತೆಯಿಂದ ಇದ್ದಂತಹ ಇತಿಹಾಸವಿದೆ. ಆದ್ದರಿಂದ ಶಾಂತಿ ಸುವ್ಯವಸ್ಥೆಯಿಂದ ಜನತೆ ಬಾಳಬೇಕೆಂದರು.
ಇನ್ನು ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಾಗೂ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.