ಮಂಗಳೂರು, ಜ 20: ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಇಳಿಮುಖವಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಲ್ಲಿಯ ಜನರು ಶಾಂತಿ ಬಯಸುತ್ತಿದ್ದಾರೆ. ಮತೀಯ ಶಕ್ತಿಗಳಿಗೆ ಯಾವತ್ತೂ ಒತ್ತು ಹಾಕುವುದಿಲ್ಲ. ಆದರೆ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳು ಘಟನೆಗಳಿಗೆ ಮತೀಯ ಬಣ್ಣ ಹಚ್ಚಿ ಸುಳ್ಳು ಸುದ್ದಿ ಹಬ್ಬಿಸುತ್ತದೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶೇ.99 ಮಂದಿ ಶಾಂತಿಪ್ರಿಯರು. ಕೇವಲ ಶೇ. 1 ರಷ್ಟು ಮಂದಿ ಮಾತ್ರ ಶಾಂತಿ ಕದಡುತ್ತಿದ್ದಾರೆ. ರೌಡಿಗಳ ನಡುವಿನ ಕಾಳಗಕ್ಕೆ ಶಾಂತಿ ಪ್ರಿಯ ಜನರು ತಲೆಕೆಡಿಸಿಕೊಳ್ಳದಿದ್ದರೂ, ಇಲ್ಲಿನ ಮಾಧ್ಯಮಗಳು ವಿಪರೀತ ಪ್ರಚಾರ ನೀಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ವಾಟ್ಸಾಪ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕದಡುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.