ಉಡುಪಿ, ಜ 20: ಹಿರಿಯ ಪೇಜಾವರ ಶ್ರೀಗಳ ಆಪ್ತರು ಮಠವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಶಿರೂರು ಮಠಾಧೀಶರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆಮಾತನಾಡಿದ ಶಿರೂರು ಶ್ರೀಗಳು, ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಳೆದ ಕೆಲವು ವರ್ಷಗಳಿಂದ ಕಣ್ಣೆದುರಿಗೆ ಅಕ್ರಮ ಕೆಲಸಗಳು ನಡೆಯುತ್ತಿದೆ. ಇದನ್ನು ನೋಡಲಾಗದೇ, ಏನೂ ಮಾಡಲಾಗದೇ ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ, ಬಟ್ಟೆಮಳಿಗೆಗಳನ್ನು ಜೆಸಿಬಿ ತಂದು ಶಿರೂರು ಶ್ರೀಗಳು ನೆಲಕ್ಕುರುಳಿಸಿದ ಪ್ರಸಂಗ ನಡೆದಿದೆ.
ಉಡುಪಿ ಕೃಷ್ಣಮಠದ ಸಮೀಪವಿರುವ ಬಿರ್ಲಾ ಛತ್ರದ ಹಿಂದುಗಡೆಯ ಪಾರ್ಕಿಂಗ್ ಜಾಗ ಶಿರೂರು ಮಠಕ್ಕೆ ಸೇರಿದ್ದು. ಆದರೆ ಈ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಕಟ್ಟಲಾಗಿದೆ. ಜೊತೆಗೆ, ಪ್ರವಾಸಿ ವಾಹನಗಳಿಗೆ ಭಾರೀ ಶುಲ್ಕ ವಿಧಿಸಲಾಗುತ್ತಿದೆ. ಸುಮಾರು ಐದು ಎಕರೆಯ ಈ ಜಾಗವನ್ನು ನಮ್ಮ ಮಠ ಕೃಷ್ಣಮಠ ಟ್ರಸ್ಟಿಗೆ ದಾನವಾಗಿ ಬರೆದುಕೊಟ್ಟಿದ್ದು ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಅಕ್ರಮವಾಗಿ ತಲೆ ಎತ್ತಿರುವ ಸುಮಾರು ಹದಿನೈದು ಅಂಗಡಿಗಳಿಂದ ದಿನದ ಶುಲ್ಕವಿಧಿಸಿ ವಸೂಲು ಮಾಡಲಾಗುತ್ತಿದೆ. ಜೊತೆಗೆ, ಪಾರ್ಕಿಂಗ್ ನಿಂದ ಬರುವ ಆದಾಯ ಕಳೆದ ಎರಡು ವರ್ಷಗಳಿಂದ ದೇವಾಲಯಕ್ಕೆ ಹೋಗುತ್ತಿಲ್ಲ, ಪ್ರವಾಸಿಗರಿಗೆ ಇಲ್ಲಿ ತೊಂದರೆ ಕೊಡಲಾಗುತ್ತಿದೆ ಎಂದು ಶಿರೂರು ಶ್ರೀಗಳು ಯಾವುದೇ ಮುನ್ಸೂಚನೆ ನೀಡದೇ ಜೆಸಿಬಿಯಿಂದ ಎಲ್ಲಾ ಅಂಗಡಿಗಳನ್ನು ನೆಲೆಸಮಗೊಳಿಸಿದ್ದಾರೆ.
ಉಡುಪಿ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮಗಳಿಗೆ ಪೇಜಾವರ ಶ್ರೀಗಳ ಆಪ್ತರೇ ಕಾರಣ. ಪಾರ್ಕಿಂಗ್ ಮತ್ತು ಅಕ್ರಮವಾಗಿ ಅಂಗಡಿಯವರಿಂದ ಹಣ ಪಡೆದುಕೊಂಡು ಮಠದ ಆದಾಯಕ್ಕೆ ಪೇಜಾವರ ಶ್ರೀಗಳ ಆಪ್ತರು ಧಕ್ಕೆ ತಂದಿದ್ದಾರೆಂದು ಆರೋಪಿಸಿದ್ದಾರೆ.