ಬೆಳ್ತಂಗಡಿ, ಡಿ 18 (DaijiworldNews/SM): ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಲೈಂಗಿಕ ಕಿರುಕುಳಗಳಂತಹ ಅಪರಾಧ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಅಶ್ಲೀಲ ವೆಬ್ಸೈಟುಗಳು ಪ್ರಮುಖ ಕಾರಣವಾಗಿದೆ. ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಬೇಕೆಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸಬೇಕಾದರೆ, ಅಶ್ಲೀಲ ವೆಬ್ ಸೈಟ್ ಗಳಿಗೆ ಬ್ರೇಕ್ ಬೀಳಬೇಕು. ಈ ಹಿನ್ನೆಲೆಯಲ್ಲಿ ಬಿಷಪ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳ ಪ್ರಭಾವ ಹೆಚ್ಚಾಗಿದ್ದು, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದುರುಪಯೋಗ ಪಡೆಸಲಾಗುತ್ತಿದೆ. ಮಹಿಳೆಯರ ಮತ್ತು ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುವ ಕೆಲಸ ನಮ್ಮ ಸಮಾಜದಲ್ಲಿ ಕೆಲವೊಂದು ಕಿಡಿಗೇಡಿಗಳಿಂದ ನಡೆಯುತ್ತಿದೆ. ಇದಕ್ಕೆ ಕೊನೆ ಹಾಕಲೇಬೇಕಾಗಿದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಈ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ. ಅವರ ಮನಸ್ಥಿತಿ ಹಾಳಾಗಲು ಈ ರೀತಿಯ ಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಅಶ್ಲೀಲ ಜಾಲತಾಣಗಳನ್ನು ಮತ್ತು ಆಶ್ಲೀಲ ಮಾಹಿತಿಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.