ಬೆಳ್ತಂಗಡಿ , ಡಿ 18 (DaijiworldNews/SM): ಗ್ರಾಮ ಪಂಚಾಯತ್ ಗಳ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡುತ್ತಿದ್ದು 75% ಅಧಿಕ ತೆರಿಗೆ ಸಂಗ್ರಹಿಸುವ ಗ್ರಾಮ ಪಂಚಾಯತ್ ಗೆ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಬುಧವಾರ ಮಡಂತ್ಯಾರು ಗ್ರಾ.ಪಂ ಸಭಾಭವನದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯತ್ ಮಡಂತ್ಯಾರು ಇದರ ವತಿಯಿಂದ ನಡೆದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿದರೆ ಊರಿನ ಉನ್ನತಿಯಾಗುವುದಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ಅಧಿಕಾರದಲ್ಲಿರುವವರು ಯಾವುದೇ ಕ್ಷೇತ್ರವಿರಲಿ ಅಭಿವೃದ್ಧಿಗೆ ಸಮಾನ ಆಧ್ಯತೆಯನ್ನು ನೀಡಬೇಕು. ಆ ಸಂದರ್ಭದಲ್ಲಿ ಊರು, ಗ್ರಾಮ, ರಾಜ್ಯ, ದೇಶ ಉನ್ನಿತಿಯ ಪಥದತ್ತ ದಾಪುಗಾಲು ಇಡಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯತ್ಗಳು ಸ್ವತಂತ್ರವಾಗಿ ಆಡಳಿತ ನಡೆಸುವ ಸರಕಾರವಾಗಿರಬೇಕು. ಕಟ್ಟಕಡೆಯ ವ್ಯಕ್ತಿಗೂ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಬೇಕು ಎಂಬ ಉದ್ದೇಶದಿಂದ ಪಂಚಾಯತ್ರಾಜ್ ವ್ಯವಸ್ಥೆ ಜಾರಿಯಾಗಿದ್ದು ಇದರಿಂದ ಇಂದುಅನಕ್ಷರಸ್ಥರೂ ಕೂಡ ಗ್ರಾ.ಪಂ ಸದಸ್ಯರಾಗಿದ್ದು ರಾಜ್ಯದಲ್ಲಿ 99 ಸಾವಿರ ಗ್ರಾಮ ಪಂಚಾಯತ್ ಸದಸ್ಯರಲ್ಲಿ ೫೨ ಸಾವಿರ ಮಹಿಳೆಯರು ಸದಸ್ಯರಾಗಿದ್ದಾರೆ. ಅದರಲ್ಲಿ ೨೫ ಸಾವಿರ ಪ.ಜಾತಿ, ಪಂಗಡದ ಸದಸ್ಯರಿದ್ದಾರೆ ಎಂದರು.
ನ್ಯಾಯಾಲಯ, ಸೀಮಿತ ಪ್ರಾಧಿಕಾರ ಬಿಟ್ಟರೆ ದಂಡ ಹಾಕುವ ಅಧಿಕಾರಿವಿರುವುದು ಗ್ರಾಮ ಪಂಚಾಯತ್ಗೆ ಮಾತ್ರ. ಅಂತಹ ವ್ಯವಸ್ಥೆ ಪಂಚಾಯತ್ರಾಜ್ ವ್ಯವಸ್ಥೆಯಿಂದ ಬಂದಿದೆ ಎಂದರು.