ಉಡುಪಿ, ಡಿ 18 (DaijiworldNews/SM): ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲರೂ ತಿಳಿಯಲು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯವನ್ನುತಡೆಯುವ ನಿಟ್ಟಿನಲ್ಲಿ ಜಿಲ್ಲೆಯಎಲ್ಲಾ ಶಾಲಾ-ಕಾಲೇಜು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಸರಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸ್ಟಿಕ್ಕರ್ ಅಳವಡಿಕೆ ಹಾಗೂ ಮಕ್ಕಳ ಸಹಾಯವಾಣಿಯ ಬಗೆಗಿನ ಗೋಡೆ ಬರಹಗಳನ್ನು ಬರೆಸಬೇಕು ಎಂದು ಜಿಲ್ಲಾದಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಬುಧವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಹಾಯವಾಣಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಮನೆ, ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಆದಷ್ಟು ಪ್ರಚಾರಗೊಳಿಸಿ ಮಕ್ಕಳ ಏಳಿಗೆಗೆ ಎಲ್ಲರೂ ಶ್ರಮಿಸಬೇಕು. ಶಾಲಾ-ಕಾಲೇಜು, ಎಲ್ಲಾ ಸರಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸ್ಟಿಕ್ಕರ್ ಅಳವಡಿಕೆ ಹಾಗೂ ಮಕ್ಕಳ ಸಹಾಯವಾಣಿಯ ಬಗೆಗಿನ ಗೋಡೆ ಬರಹಗಳನ್ನು ಬರೆಯುವುದು ಮಾತ್ರವಲ್ಲದೇ ಶಾಲಾ ವಾಹನ ಹಾಗೂ ಬಸ್, ರಿಕ್ಷಾ ಸೇರಿದಂತೆ ಸಾರ್ವಜನಿಕ ಹಾಗೂ ಸರ್ಕಾರಿ ವಾಹನಗಗಳಲ್ಲಿಯೂ ಸಹಾಯವಾಣಿ ಸಂಖ್ಯೆಯ ಸ್ಟಿಕ್ಕರ್ ಅಳವಡಿಸಬೇಕು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಯಲು ಎಲ್ಲರೂ ಮಕ್ಕಳ ಮನದ ಅಂತರಂಗ ಪುಸ್ತಕವನ್ನು ಓದುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿ, ಎಲ್ಲಾ ಶಾಲಾ ಕಾಲೇಜು ಶಿಕ್ಷಕರುಗಳಿಗೆ ಪುಸ್ತಕ ವಿತರಿಸಬೇಕು ಎಂದು ಸಲಹೆ ನೀಡಿದರು.
ಮಲ್ಪೆ ಬಂದರಿನಲ್ಲಿ ಮೀನು ಕದಿಯುತ್ತಿರುವ ಮಕ್ಕಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಜಿಲ್ಲಾಡಳಿತದ ಕರ್ತವ್ಯವಾಗಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಂಡು, ನಿಯಮಿತವಾಗಿ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಮತ್ತೆ ಶಾಲೆಗಳತ್ತ ಮುಖಮಾಡುವಂತೆ ಮಾಡಬೇಕು ಎಂದು ತಿಳಿಸಿದರು.
ಬಾಲ ಕಾರ್ಮಿಕ ಕಾನೂನು ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ಶೇಶಪ್ಪಅವರ ಹೇಳಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಕಾನೂನು ವಿರುದ್ಧ ಯಾವುದೇ ಕಾರ್ಯ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.