ಮಂಗಳೂರು, ಜ 20: ಸರ್ವ ಧರ್ಮದ ಪುಣ್ಯಕ್ಷೇತ್ರವಾಗಿರುವ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಶಾಂತಿ ಹಾಗೂ ಸೌಹಾರ್ದಕ್ಕೆ ಪ್ರತೀಕವಾಗಿ ದ್ವಾರವೊಂದನ್ನು ನಿರ್ಮಿಸಿದ್ದು ಕರಾವಳಿಯ ಜನತೆಗೆ ಉತ್ತಮ ಸಂದೇಶ ಸಾರಿದೆ.
ಸಂತ ಸೆಬಾಸ್ಟಿಯನ್ ಚರ್ಚ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ದ್ವಾರ ನಿರ್ಮಿಸಿದ್ದು, ಎಲ್ಲಾ ಜಾತಿ, ಧರ್ಮದವರು ಒಗ್ಗಟ್ಟಾಗಿ ಸೌಹರ್ದತೆಯಿಂದ ಕೂಡಿ ಬಾಳುವ ಸಂದೇಶ ಸಾರಿದೆ. ಸರ್ವ ಧರ್ಮದವರನ್ನು ಸ್ವಾಗತಿಸುವ ಬಲು ಅಪರೂಪದ ದ್ವಾರ ಇದಾಗಿದ್ದು ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ.
ಶತಮಾನೋತ್ಸವದ ಸಂಭ್ರಮದಲ್ಲಿದೆ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಚರ್ಚ್
ಉಳ್ಳಾಲದ ತೊಕ್ಕೊಟು ಪೆರ್ಮನ್ನೂರಿನ ಸಮೀಪದ ಸಂತ ಸೆಬಾಸ್ಟಿಯನ್ ಚರ್ಚ್ ಶತಮಾನೋತ್ಸವದ ಸಂಭ್ರಮದಲ್ಲಿದೆ. ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರ 1918ರಲ್ಲಿ ಸ್ಥಾಪನೆಗೊಂಡು ನೂರು ವರ್ಷಗಳನ್ನು ಪೂರೈಸಿದೆ. ಪೆರ್ಮನ್ನೂರು, ತೊಕ್ಕೊಟ್ಟು, ಉಳ್ಳಾಲ ಪರಿಸರದ ಜನರು 19 ನೇ ಶತಮಾನದಲ್ಲಿ ದೇರಳಕಟ್ಟೆ ಸಮೀಪದ ಪಾನೀರ್ ಇಗರ್ಜಿಯಲ್ಲಿ ದೇವರ ಆರಾಧನೆ ಮಾಡುತ್ತಿದ್ದರು. 300ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಿಂದ ದೇವರ ಆರಾಧನೆಗೆ ದೇರಳಕಟ್ಟೆ ಸಮೀಪವಿರುವ ಪಾನೀರ್ ಇಗರ್ಜಿಗೆ ತೆರಳುತ್ತಿದ್ದರು.
ತದನಂತರ 20ನೇ ಶತಮಾನದ ಆರಂಭದಲ್ಲಿ ಬಬ್ಬುಕಟ್ಟೆಯಲ್ಲಿ ಜನರ ಅನುಕೂಲಕ್ಕಾಗಿ ಸಣ್ಣ ಪ್ರಾರ್ಥನ ಮಂದಿರವನ್ನು ಕಟ್ಟಲಾಯಿತು. ಬಬ್ಬುಕಟ್ಟೆಯ ಪ್ರಾರ್ಥನ ಮಂದಿರದಲ್ಲಿ ಹಲವಾರು ವರುಷಗಳ ಕಾಲ ಆರಾಧನೆ ನಡೆಯುತ್ತಿತ್ತು. ನಂತರ ಪೆರ್ಮನ್ನೂರು ಪರಿಸರದ ಭಕ್ತಾದಿಗಳಿಗೆ ಸುಸಜ್ಜಿತ ಪ್ರಾರ್ಥನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈಗಿರುವ ಪೆರ್ಮನ್ನೂರು ಪ್ರದೇಶದಲ್ಲಿ ಚರ್ಚ್ ಸ್ಥಾಪಿಸಲಾಯಿತು.
ಇದೀಗ ಈ ಚರ್ಚ್ ಶತಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿರುವ ಹಿನ್ನೆಲೆ, ಜ.19, 20, 21 ರಂದು ಶತಮಾನೋತ್ಸವದ ಸಂಭ್ರಮ ಆಚರಿಸಲ್ಪಡುತ್ತಿದೆ.