ಮಲ್ಪೆ, ಡಿ 18 (Daijiworld News/PY) : ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ಬಲೆ ಕಾಲಿಗೆ ಸಿಲುಕಿ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತ ಮೀನುಗಾರನನ್ನು ಮಹಮ್ಮದ್ ನೌಷದ್ (21) ಎಂದು ಗುರುತಿಸಲಾಗಿದೆ.
ಮಹಮ್ಮದ್ ನೌಷದ್ ಮತ್ತು ಅವರ ಸಹೋದರ ಆಸ್ಪಕ್ ಹಾಗೂ ಇತರೆ ಮೀನುಗಾರರೊಂದಿಗೆ ಡಿ.17ರ ಮಂಗಳವಾರದಂದು ರಾತ್ರಿ ಗಂಟೆ 12.15ರ ಸುಮಾರಿಗೆ ದತ್ತಾತ್ರೇಯ ಎಂಬ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ಮಲ್ಪೆ ಬಂದರಿನಿಂದ ಹೊರಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಈ ಘಟನೆ ನಡೆದಿದೆ.
ಮುಂಜಾನೆ 1.20 ವೇಳೆಗೆ ಮಹಮ್ಮದ್ ನೌಷದ್ ಮೀನಿನ ಬಲೆಯನ್ನು ಬಿಡುತ್ತಿರುವಾಗ ಆಕಸ್ಮಿಕವಾಗಿ ಬಲೆ ಆತನ ಕಾಲಿಗೆ ಸಿಲುಕಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಯುವಕನನ್ನು ಸಮುದ್ರದ ನೀರಿನಿಂದ ಹೊರಗೆ ತೆಗೆದು ದೋಣಿಯಲ್ಲಿ ಆರೈಕೆ ಮಾಡಿ ಬಳಿಕ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ನೌಷದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.