ಕುಂದಾಪುರ, ಸೆ16: ಐರೋಡಿ ಗ್ರಾಮ ಪಂಚಾಯತ್ನ ಗ್ರಾಮಸಭೆ ಆರೋಪ, ದೂರುಗಳೊಂದಿಗೆ ತಾಸಿಗೂ ಹೆಚ್ಚು ಕಾಲ ಗದ್ದಲದೊಂದಿಗೆ ನಡೆಯಿತು. ಆರೋಪ ಮತ್ತು ಪ್ರತ್ಯಾರೋಪಗಳಿಂದ ಕೋಲಾಹಲ ಸೃಷ್ಟಿಸಿದ ಈ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ಮೋಸೆಸ್ ರೋಡಿಗ್ರಸ್ ಅವರ ಅಧ್ಯಕ್ಷತೆಯಲ್ಲಿ ದೂಳಂಗಡಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಶುಕ್ರವಾರ ಜರಗಿತು.
ಗದ್ದಲದಿಂದಲೇ ಆರಂಭವಾದ ಈ ಗ್ರಾಮ ಸಭೆಯಲ್ಲಿ ಸಿ ಆರ್ ಝಡ್, ಮಾಲಿನ್ಯ ಇಲಾಖೆ, ಬಂದರು, ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಬರುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಅಹ್ವಾನಿಸದ ಇಲಾಖೆಯ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ. ಪರಿಣಾಮ, ಗ್ರಾಮಸ್ಥರು ಆಕ್ರೋಶಗೊಂಡು ಅಧಿಕಾರಿಗಳ ಅನುಪಸ್ಥಿತಿಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು, ಸಿ ಆರ್ ಝೆಡ್ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಗ್ರಾಮ ಸಭೆಗೆ ಆಗಮಿಸುವಂತೆ ಮಾಡಿದ ಪ್ರಸಂಗ ನಡೆಯಿತು.
ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು ಗ್ರಾಮಸ್ಥರೊಬ್ಬರ ಮಾತು:
ಐರೋಡಿಯಲ್ಲಿ ಪ್ರತಿ ಭಾರಿ ಗ್ರಾಮಸಭೆ ನಡೆಯುವಾಗ ಕೆಲವೇ ಕೆಲವು ಮಂದಿ ಮಾತನಾಡಿ, ಗ್ರಾಮ ಸಭೆಗೆ ಮಂಗಳ ಹಾಡುತ್ತಿದ್ದರು. ಹೀಗಾಗಿ, ಪ್ರತಿಯೊಬ್ಬ ಗ್ರಾಮಸ್ಥರಿಗೂ ಸಭೆಯಲ್ಲಿ ಪ್ರಶ್ನೆ ಕೇಳಲು ಅವಕಾಶ ಕೊಡಬೇಕು. ಕೇವಲ ನಾಲ್ಕೈದು ಮಂದಿ ಸಭೆಯನ್ನು ಹಿಡಿತದಲ್ಲಿಟ್ಟುಕೊಳ್ಳಬಾರದು ಎಂಬ ಗ್ರಾಮಸ್ಥರೊಬ್ಬರ ಮಾತು ಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತು.
ಪರಿಸರ ವಿರೋಧಿ ಫಿಶ್ ಮಿಲ್ ನಮಗೆ ಬೇಡ ಎಂದ ಗ್ರಾಮಸ್ಥರು:
ಗ್ರಾಮ ಸಭೆಯಲ್ಲಿ ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಾಳ್ಕುದ್ರು ಗ್ರಾಮದಲ್ಲ್ಲಿ ಫಿಶ್ ಕಟ್ಟಿಂಗ್ ಘಟಕ ನಿರ್ಮಾಣವಾಗುವ ಕುರಿತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ಫಿಶ್ ಮಿಲ್ ಶೆಡ್ಗೆ ಹೊಸ ಪರವಾನಿಗೆ ನೀಡಬಾರದು ಎಂದು ಗ್ರಾಮ ಪಂಚಾಯತ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದೇವೆ. ಆದರೆ ಈ ಕುರಿತು ಯಾವುದೇ ಹಿಂಬರಹ ಅಥವಾ ಇತರ ಉತ್ತರವನ್ನು ಸಂಬಂಧಿಸಿದ ಅಧಿಕಾರಿಗಳು ನಮಗೆ ನೀಡಿಲ್ಲ. ಈ ಮೂಲಕವಾಗಿ ಫಿಶ್ಕಟ್ಟಿಂಗ್ ಘಟಕಕ್ಕೆ ಬೆಂಬಲವಾಗಿ ನಿಂತು ಗ್ರಾಮ ಪಂಚಾಯತ್ ನಡೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಪಿಡಿಓ ಸುಭಾಷ್ ಖಾರ್ವಿ, ಫಿಶ್ ಕಟ್ಟಿಂಗ್ ಘಟಕದ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಗ್ರಾಮ ಪಂಚಾಯತ್ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸಭೆಗೆ ತಿಳಿಸಿದರು. ಅದಕ್ಕೆ ಸುಮ್ಮನಿರದ ಗ್ರಾಮಸ್ಥರು ಹಾಗಾದರೆ ನ್ಯಾಯಾಲಯದ ಆದೇಶ ಧಿಕ್ಕರಿಸಿ ಅವರ ಫಿಶ್ ಕಟ್ಟಿಂಗ್ ಘಟಕ ಕಾರ್ಯಾಚರಿಸುತ್ತಿರುವುದು ಸರಿಯಾ ಎಂದು ಪಿಡಿಓ ಅವರನ್ನೇ ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ಸದಸ್ಯರು ಸಾರ್ವಜನಿಕರ ಪರವಾಗಿ ನಿಲ್ಲುತ್ತಿಲ್ಲ ಇದಕ್ಕೆ ಸಾಕ್ಷಿ ಬಾಳ್ಕೂದ್ರುವಿನಲ್ಲಿ ನಡೆದ ಫಿಶ್ ಪೌಡರ್ ಘಟಕ ಎಂದು ಗ್ರಾಮಸ್ಥರಾದ ಡೆನ್ನಿಸ್ ಡಿಸೋಜಾ ಹೇಳಿದಾದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬೇಬಿ ಮಡಿವಾಳ ಆಕ್ರೋಶಿತಗೊಂಡು, ಸಾಮಾನ್ಯ ಸಭೆಗಳಲ್ಲಿ ಸದಸ್ಯರ ವಾಕ್ ಸ್ವಾತಂತ್ರ್ಯ ಹರಣವಾಗುತ್ತಿದ್ದು, ಕೆಲವು ಸದಸ್ಯರು ನಮಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಯಾವ ಸದಸ್ಯರಿಂದ ನಿಮ್ಮ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಉಪಾಧ್ಯಕರು ಅಧ್ಯಕ್ಷ ಮೋಸೇಸ್ ರೋಡ್ರಿಗ್ಸ್, ಸದಸ್ಯರಾದ ಶಿವರಾಮ ಮತ್ತು ರಾಮರವರು ನನಗೆ ಸಾಮಾನ್ಯ ಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೇರವಾಗಿ ಆರೋಪಿಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಉಪಾಧ್ಯಕ್ಷರ ವಿರುದ್ಧ ಮುಗಿಬಿದ್ದರು. ಮಾತಿನ ಚಕಮಕಿ ತೀರ ತಾರಕಕ್ಕೇರಿ, ನೀನು ತಾನು ಎಂದು ಸದಸ್ಯರು ಕೂಗಾಡಿದ್ದು. ಈ ವೇಳೆ ಕೋಟ ಠಾಣೆಯ ಪೊಲೀಸರು ಗ್ರಾಮ ಸಭೆಗೆ ಆಗಮಿಸುವ ಪರಿಸ್ಥಿತಿ ಉಂಟಾಯಿತು. ಗ್ರಾಮಸ್ಥರು ಮತ್ತು ಸದಸ್ಯರ ನಡುವೆ ನಡೆದ ಜಟಾಪಟಿ ಶಾಂತಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಹಂಗಾರಕಟ್ಟೆಯಲ್ಲಿ ಆರಂಭಗೊಳ್ಳಬೇಕಿದ್ದ ಫಿಶ್ ಕಟ್ಟಿಂಗ್ ಘಟಕೆಕ್ಕೆ ಎಲ್ಲಾ ಇಲಾಖೆಯಿಂದ ನೀಡಲಾದ ಲೈಸೆನ್ಸ್ಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇನ್ನು ಮುಂದೆ ಗ್ರಾಮಸ್ಥರನ್ನ ಗಣನೆಗೆ ತೆಗೆದುಕೊಳ್ಳದೆ ಯಾವುದೇ ಕಾರಣಕ್ಕೂ ಲೈಸೆನ್ಸ್ ನೀಡಬಾರದು ಎಂದು ಸಿಆರ್ಝೆಡ್ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಉಡುಪಿ ತಾಲೂಕು ಪಂಚಾಯತ್ ಸದಸ್ಯ ಜ್ಯೋತಿ ಉದಯ ಪೂಜಾರಿ, ವಸಂತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.