ಉಪ್ಪಿನಂಗಡಿ, ಜ 20: ನಕ್ಸಲರಿಗಾಗಿ ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಆರಂಭವಾಗಿದ್ದ ಶೋಧ ಕಾರ್ಯ ಅಂತ್ಯಗೊಂಡಿದ್ದು, ನಕ್ಸಲ್ ನಿಗ್ರಹ ಪಡೆ ವಾಪಸ್ ತೆರಳಿದೆ.
ನಕ್ಸಲ್ ನಿಗ್ರಹ ಪಡೆಯ ತಂಡಗಳು ಶಿಶಿಲ, ದೇರಗುಂಡಿ, ಮಿತ್ತಮಜಲು, ಉದನೆ, ಅರ್ಬಿಗುಡ್ಡೆ, ಚೆರ್ವತ್ತಡ್ಕ ಗುಡ್ಡೆ, ನೇರೆಂಕಿ ಮಲೆ, ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿ ನಕ್ಸಲರಿಗಾಗಿ ಶೋಧ ನಡೆಸಿತ್ತು. ಯಾವುದೇ ಸುಳಿವು ದೊರೆಕದೇ ಇರುವುದರಿಂದ ಅಧಿಕಾರಿಗಳ ಆದೇಶದಂತೆ ಶೋಧವನ್ನು ಅಂತ್ಯಗೊಳಿಸಲಾಗಿದೆ.
ಶಿರಾಡಿ ಗ್ರಾಮದ ಮಿತ್ತಮಜಲು ಸಮೀಪ ಹೆಬ್ರಿ ಎಎನ್ಎಫ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಕಿಗ್ಗ ಎಎನ್ಎಫ್ನ ಎಸ್ಐ ಅಮರೇಶ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕವಾಗಿ ಶೋಧಕಾರ್ಯ ನಡೆಸುತ್ತಿದ್ದವು. ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಗುರುವಾರ ಶೋಧ ಮುಗಿಸಿ ಕೇಂದ್ರ ಸ್ಥಾನವಾದ ಹೆಬ್ರಿ ತೆರಳಿದ್ದರೆ, ಅಮರೇಶ್ ನೇತೃತ್ವದ ತಂಡ ಶುಕ್ರವಾರ ಕೇಂದ್ರ ಸ್ಥಾನವಾದ ಕಿಗ್ಗಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ.