ಬೆಳ್ತಂಗಡಿ, ಡಿ 17 (DaijiworldNews/SM): ಪತಿಯೇ ತನ್ನ ಪತ್ನಿಯನ್ನು ಕೊಲೆಗೈದಿರುವ ಘಟನೆಯೊಂದು ಇಲ್ಲಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ಡಿಸೆಂಬರ್ 17ರ ಮಂಗಳವಾರದಂದು ನಡೆದಿದೆ. ಮೃತರನ್ನು ಇಳಂತಿಲ ಗ್ರಾಮದ ತಸ್ಲೀಮ(25)ಎಂದು ಗುರುತಿಸಲಾಗಿದೆ. ಪತಿ ಫಾರೂಕ್ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಮೃತ ಮಹಿಳೆ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಉಮರ್ ಫಾರೂಕ್ ಎಂಬರೊಂದಿಗೆ ವಿವಾಹವಾಗಿದರು. ಈ ಜೋಡಿಗೆ 4 ವರ್ಷದ ಗಂಡು ಮಗು ಮತ್ತು 2 ವರ್ಷದ ಹೆಣ್ಣು ಮಗು ಸೇರಿ ಇಬ್ಬರು ಮಕ್ಕಳಿದ್ದಾರೆ.
ಮಹಿಳೆಯ ಮೃತ ದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ. ಪ್ರತಿ ದಿನ ರಾತ್ರಿ ಮನೆಯಲ್ಲಿ ಜಗಳವಾಗುತ್ತಿದ್ದು ನಿನ್ನೆಯು ಜಗಳವಾಗುತ್ತಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಆರೋಪಿತನಿಗೆ ಈ ಹಿಂದೆ ಎರಡು ಮದುವೆಯಾಗಿದ್ದು ಇವರು ಕೂಡ ಈತನ ಕಿರುಕುಳ ತಾಳಲಾರದೆ ಆತನನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಈತನ ವಿರುದ್ದ ಪುಂಜಾಲಕಟ್ಟೆ, ವೇಣೂರು ಸೇರಿದಂತೆ ಬೇರೆ ಜಿಲ್ಲೆಯ ಪೋಲೀಸ್ ಠಾಣೆಯಲ್ಲೂ ಕೂಡ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಬೆಳ್ತಂಗಡಿ ಎಸ್.ಐ ನಂದಕುಮಾರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.