ಮಂಗಳೂರು, ಜ 20: ಕಡಲ ನಗರಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಇಂದಿನಿಂದ ಸಂಚಾರ ಸಂಪೂರ್ಣ ಬಂದ್ ಆಗಲಿದೆ.
ಹಾಸನ ಜಿಲ್ಲೆಯ ಕೆಂಪುಹೊಳೆ ಗೆಸ್ಟ್ ಹೌಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆವರೆಗಿನ ಸುಮಾರು 13 ಕಿ.ಮೀ ರಸ್ತೆ ಅಭಿವೃದ್ಧಿಗೊಳಿಸಬೇಕಾಗಿರೋದ್ರಿಂದ ಮಂಗಳೂರು-ಬೆಂಗಳೂರು ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯನ್ನು ಬಂದ್ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆದೇಶಿಸಿದೆ.
ಇದೀಗ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡನೇ ಹಂತದ ಕಾಂಕ್ರಿಟ್ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೂ ಶಿರಾಡಿ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಶಿರಾಡಿಘಾಟ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗಲಿದ್ದು, ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಲಿದೆ.
ಶಿರಾಡಿಘಾಟ್ ರಸ್ತೆ ದುರಸ್ತಿ ಹಿನ್ನೆಲೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು 139 ಕಿ.ಮೀ ಹೆಚ್ಚುವರಿ ದೂರ ಸಂಚರಿಸಲಿದ್ದು, 20 ಕಿ.ಮೀ ಹೆಚ್ಚುವರಿ ದೂರ ಪ್ರಯಾಣಿಸಬೇಕಾಗಿದೆ.