ಬಂಟ್ವಾಳ, ಡಿ 17(Daijiworld News/MSP): ಪೌರತ್ವ ಕಾಯ್ದೆ ಭಾರತವನ್ನು ವಿಭಜನೆ ಮಾಡುತ್ತದೆ, ಇದು ಭಾರತೀಯರಿಗೆ ಹಿತವಾದುದಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಬಿ.ಸಿ ರೋಡಿನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, "ಬಂಡವಾಳಶಾಹಿಗಳಿಗೆ ಹಿತವಾದ ಎನ್.ಡಿ.ಎ.ಸರಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಕಾಯ್ದೆ ಸಮಾಜದ ಸಾಮರಸ್ಯಕ್ಕೆ ತೊಂದರೆ ಕೊಡುವ ಕಾಯ್ದೆಯಾಗಿದೆ, ಇದರ ವಿರುದ್ದ ಎಲ್ಲಾ ಜಾತಿ ಮತದ ಬಾಂಧವರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ" ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮದ ವಿರುದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ ಎಂಬುದಕ್ಕೆ ದೇಶದಲ್ಲಿ ನಡೆಯುವ ಅತ್ಯಾಚಾರಗಳೇ ಸಾಕ್ಷಿ. ಜಾತಿ,ಬಣ್ಣ,ಧರ್ಮದಿಂದ ಮನುಷ್ಯನ ಪ್ರೀತಿ ಮಾಡಬಾರದು. ಜನ್ ಧನ್ ಖಾತೆಯಿಂದ ಹಿಡಿದು ಯಾವುದೇ ಯೋಜನೆಗಳು ಈಡೇರಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಮಂಜುಳಾ ಮಾದವ ಮಾವೆ, ಅಬ್ಬಾಸ್ ಆಲಿ, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್ ಹಾಗೂ ಪಕ್ಷದ ಎಲ್ಲಾ ಪ್ರಮುಖರು ಹಾಜರಿದ್ದರು.