ಉಡುಪಿ, ಡಿ 17(Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲಿದ್ದು ದೆಹಲಿಯ ಜಾಮಿಯಾ ಮಿಲ್ಲಿಯಾ ಮತ್ತು ಅಲಿಘಡ್ ವಿಶ್ವವಿದ್ಯಾನಿಲಯದ ಪ್ರತಿಭಟನಾ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಗುಂಡು ಮತ್ತು ಅಶ್ರವಾಯು ಸಿಡಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೌರ್ಜನವೆಸಗಿರುವುದನ್ನು ಖಂಡಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ಸದಸ್ಯರು ಉಡುಪಿ ಜಾಮಿಯಾ ಮಸೀದಿ ಹೊರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಐ.ಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರ್, ಪೌರತ್ವ ತಿದ್ದುಪಡಿ ಕಾಯ್ದೆಯು ಈ ದೇಶ ವಿರೋಧಿ ಸಂವಿಧಾನ ವಿರೋಧಿಯಾಗಿದ್ದು ಈ ಕಾಯ್ದೆಯನ್ನು ವಿರೋಧಿಸಿ ಸಂವಿಧಾನದ ಪ್ರಕಾರ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಪೊಲೀಸರ ಮೂಲಕ ಪ್ರತಿಭಟನೆಯನ್ನು ತಡೆಯುವ ತಂತ್ರಗಳು ನಡೆಯುತ್ತಿದೆ. ಪ್ರತಿಭಟನಾ ನಿರತ ಜಾಮಿಯಾ ಮಿಲ್ಲಿಯಾ ಮತ್ತು ಅಲಿಘಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಕಾರ್ಯದರ್ಶಿ ಶಾರೂಕ್ ತೀರ್ಥಹಳ್ಳಿ, ಸದಸ್ಯರಾದ ವಸೀಮ್ ಅಬ್ದುಲ್ಲಾ, ಫಾಝಿಲ್, ರಿಹಾನ್, ಅನ್ಸರ್ ಮುಂತಾದವರು ಉಪಸ್ಥಿತರಿದ್ದರು.