ಮಂಗಳೂರು, ಜ 19: ನನಗೂ ನಟೋರಿಯಸ್ ರೌಡಿ ಇಲಿಯಾಸ್ಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಹಂತಕ ಎಂದಿದ್ದ ಸಚಿವ ಯು.ಟಿ ಖಾದರ್ ಗೆ ಇದೀಗ ದೊಡ್ಡ ಶಾಕ್ ಕಾದಿದೆ.
ಈ ಹಿಂದೆ ಸಚಿವ ಯು.ಡಿ ಖಾದರ್, ರೌಡಿ ಇಲಿಯಾಸ್ ಜೊತೆ ನನಗೆ ಯಾವುದೇ ಸಂಪರ್ಕವಿಲ್ಲ. ಅವನು ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆದರೆ ನನಗೆ ಆತ ಯಾರು ಎಂದು ತಿಳಿದಿಲ್ಲ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲ ಎಂದಿದ್ದರು.
ನನಗೆ ಏನೂ ಗೊತ್ತೇ ಇಲ್ಲ ಎನ್ನುತ್ತಿದ್ದ ಯುಟಿ ಖಾದರ್ ಹೇಳಿಕೆಗೆ ಇಲಿಯಾಸ್ ಪತ್ನಿ ಫರ್ಝಾನ ತಡವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಆಹಾರ ಸಚಿವ ಯುಟಿ ಖಾದರ್ ಅವರು ಚುನಾವಣೆಯ ಸಮಯದಲ್ಲಿ ಮನೆ ಮುಂದೆ ಬಂದು ಕಾಯುತ್ತಿದ್ದರು. ಆದರೆ ನನ್ನ ಗಂಡ ಇಲಿಯಾಸ್ ಹತ್ಯೆಯಾದ ಬಳಿಕ ಇತ್ತ ತಲೆ ಹಾಕಿಯೂ ನೋಡಿಲ್ಲ. ತಮ್ಮ ಲಾಭಕ್ಕಾಗಿ ಚುನಾವಣೆ ವೇಳೆ ಬರುತ್ತಿದ್ದ ಖಾದರ್, ಗಂಡ ಸತ್ತ ಮೇಲೆ ಬಂದೇ ಇಲ್ಲ. ಮನುಷ್ಯನಿಗೆ ಬೆಲೆಯೇ ಇಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಅನೇಕ ಮಂದಿ ಕಾಂಗ್ರೆಸ್ ಮುಖಂಡರು ನನ್ನ ಗಂಡ ಬದುಕಿದ್ದಾಗ ಅವರನ್ನು ಭೇಟಿಯಾಗಲು ನಮ್ಮ ಮನೆಯ ಬಾಗಿಲಿಗೆ ಬರುತ್ತಿದ್ದರು. ಆದರೆ ಹತ್ಯೆಯಾದ ಬಳಿಕ ಸಾಂತ್ವನ ಹೇಳಲೂ ಕೂಡ ಯಾರೂ ಬಂದಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಯಾರೂ ಇಲ್ಲ ಎಂದು ಹೇಳಿದ್ದಾರೆ.
ಇಡೀ ಸಮಾಜವೇ ಅಮಾಯಕನಾಗಿದ್ದ ನನ್ನ ಗಂಡನಿಗೆ ಇಲ್ಲದ ಅಪರಾಧಿ ಪಟ್ಟ ಕಟ್ಟುತ್ತಿದ್ದಾರೆ. ಸಚಿವ ಯುಟಿ ಖಾದರ್ ಸಾಂತ್ವನದ ಮಾತುಗಳಿಂದ ನನಗೇನೂ ಸಿಗೋದಿಲ್ಲ ಅನ್ನೋದು ನನಗೆ ಗೊತ್ತಿದೆ. ಆದರೆ ಯಾವತ್ತೂ ನನ್ನ ಗಂಡ ಇಲಿಯಾಸ್ನೊಂದಿಗೆ ಇರುತ್ತಿದ್ದ ಈ ಸಚಿವರು ಈಗ ಇಲಿಯಾಸ್ ಎಂದರೆ ಯಾರು ಎಂದೇ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಾರೆ. ಇದನ್ನೆಲ್ಲಾ ನೋಡುವಾಗ ಆಶ್ಚರ್ಯವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನನ್ನ ಗಂಡನನ್ನು ಯಾರು ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ನನಗೆ ನ್ಯಾಯ ಬೇಕಾಗಿದೆ. ಇಲ್ಲವಾದರೆ ನಾನು ನನ್ನ ಮಗುವಿನೊಂದಿಗೆ ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಕಾಂಗ್ರೆಸ್ ನಾಯಕರೇ ನೇರ ಹೊಣೆಯಾಗಿರುತ್ತಾರೆ ಎಂದು ಹತ್ಯೆಗೀಡಾದ ಇಲಿಯಾಸ್ ಪತ್ನಿ ಹೇಳಿದ್ದಾರೆ.