ಮಂಗಳೂರು, ಡಿ 17 (Daijiworld News/MB) : ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಮಾಡಿದ ಪರಿಣಾಮವಾಗಿ ಆಕೆ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ತಂದೆಗೆ ಮಂಗಳೂರಿನ 2 ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿ ಕಿಶೋರ್ ಭಯ್ಯಾ (36) ಉತ್ತರ ಭಾರತ ಮೂಲದ ನಿವಾಸಿ, ಪ್ರಸ್ತುತ ನಗರದಲ್ಲಿ ವಾಸವಾಗಿದ್ದು ತನ್ನ 13 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ.
2016ರಲ್ಲಿ ಕಿಶೋರ್ ಭಯ್ಯಾನ ಪತ್ನಿ ಹೆರಿಗೆಗೆಂದು ಆಸ್ಪತ್ರಗೆ ದಾಖಲಾಗಿದ್ದ ಸಂದರ್ಭದಲ್ಲಿ ಕಿಶೋರ್ ಭಯ್ಯಾ ತನ್ನ ಪುತ್ರಿಯನ್ನು ಅತ್ಯಚಾರ ಮಾಡಿದ್ದು ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಬಾಲಕಿ ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ. ಆ ಬಳಿಕ ಆರೋಪಿ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದು ಆ ಪರಿಣಾಮವಾಗಿ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ಬಾಲಕಿಯ ತಾಯಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಠಾಣಾ ಇನ್ಸ್ಪೆಕ್ಟರ್ ಕಲಾವತಿ ಈ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 12 ಸಾಕ್ಷಿದಾರರನ್ನು ಹಾಗೂ 24 ದಾಖಲೆಗಳನ್ನು ಪರಿಗಣಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮಂಗಳೂರಿನ 2 ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಆರ್. ಪಲ್ಲವಿ ಅವರು ಆರೋಪಿ ತಪ್ಪಿತಸ್ಥ ಎಂದು ಸಾಬೀತು ಪಡಿಸಿದ್ದು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದ್ದಾರೆ.
ಅತ್ಯಾಚಾರ ನಡೆಸಿದಕ್ಕಾಗಿ ಐಪಿಸಿ 376 ಹಾಗೂ ಪೋಕ್ಸೋ ಸೆ.6(ಲೈಂಗಿಕ ದೌರ್ಜನ್ಯ) ಅನ್ವಯ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು ದಂಡ ಮೊತ್ತದಲ್ಲಿ 3 ಸಾವಿರವನ್ನು ಸಂತ್ರಸ್ಥ ಬಾಲಕಿಗೆ ನೀಡಬೇಕು ಹಾಗೂ 2 ಸಾವಿರವನ್ನು ಸರಕಾರಕ್ಕೆ ಪಾವತಿ ಮಾಡಬೇಕು. ಅಲ್ಲದೇ ಸಂತ್ರಸ್ಥ ಬಾಲಕಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕವೂ ಸರಕಾರದಿಂದ ಪರಿಹಾರ ಪಡೆಯಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.