ಕಾಸರಗೋಡು, ಜ 19: ಮಹಿಳೆಯೊಬ್ಬಳು ಕೊಲೆಗೀಡಾದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಉದುಮದಲ್ಲಿ ನಡೆದಿದೆ.
ಉದುಮ ಆಯಂಪಾರದ ಝುಬೈದಾ (60) ಕೊಲೆಗೀಡಾವವರು. ಮಹಿಳೆಯ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದು, ಮನೆಯೊಳಗಿನ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವಾಗಿದೆ ಎನ್ನಲಾಗಿದೆ.
ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ. ಇವರು ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಎರಡು ದಿನಗಳಿಂದ ಹೊರಗಡೆ ಕಾಣದಿದ್ದುದರಿಂದ ಸಂಶಯಗೊಂಡ ಪರಿಸರವಾಸಿಗಳು ಮನೆ ಬಳಿ ತೆರಳಿದಾಗ ಕೊಲೆ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆಯೇ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಮನೆಯ ಎರಡು ಬದಿಯ ಬಾಗಿಲುಗಳು ಬೀಗ ಜಡಿದ ಸ್ಥಿತಿಯಲ್ಲಿತ್ತು. ಮನೆಯೊಳಗಡೆ ಎರಡು ಗ್ಲಾಸ್, ನಿಂಬೆ ರಸ ಕೂಡಾ ಪತ್ತೆಯಾಗಿದೆ. ಮಹಿಳೆಯ ದೇಹದಲ್ಲಿದ್ದ ಎರಡು ಚಿನ್ನದ ಬಳೆ ಮತ್ತು ಸರ ನಾಪತ್ತೆಯಾಗಿದ್ದು, ಕಳ್ಳರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ
ಬೇಕಲ ಠಾಣಾ ಪೊಲೀಸ್, ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ತಲಪಿದ್ದು ತನಿಖೆ ಆರಂಭಿಸಿದ್ದಾರೆ.