ಮಂಗಳೂರು, ಡಿ 16(Daijiworld News/MSP): ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಂತೆ ಫೋಸು ನೀಡಿಕೊಂಡು ವಂಚಿಸಲು ಯತ್ನಿಸುತ್ತಿದ್ದ ಮೂವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಕ್ಷಿಪ್ರ ಕಾರ್ಯಾಚರಣೆ ತಂಡವು (ಕ್ಯೂಆರ್ಟಿ) ಡಿ.16ರ ಭಾನುವಾರ ಬಂಧಿಸಿದೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ರಿಯಾಜ್, ಮೊಹಮ್ಮದ್ ಸಾಹೇಬ್ ಕರಬೊ ಮತ್ತು ಖಾಜಿ ಅಫ್ತಾಬ್ ಎಂದು ಗುರುತಿಸಲಾಗಿದೆ. ಮಸ್ಕತ್ನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಪ್ರಯಾಣಿಕ ಮೊಹಮ್ಮದ್ ಶಮಾಸ್ ಅವರು ವಲಸೆ ಮತ್ತು ಕಸ್ಟಮ್ಸ್ ತಪಾಸಣೆ ಮುಗಿಸಿ ಹೊರಬರುತ್ತಿದ್ದ ವೇಳೆಯಲ್ಲಿ ಈ ಮೂವರು ಆರೋಪಿಗಳು ವಂಚಿಸಲು ಯತ್ನಿಸಿದ್ದರು ಎಂದು ದೂರಲಾಗಿದೆ.
ಪ್ರಯಾಣಿಕ ಮೊಹಮ್ಮದ್ ಶಮಾಸ್ ಟ್ಯಾಕ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಮೂವರು ತಾವು ಕಸ್ಟಮ್ಸ್ ಅಧಿಕಾರಿಗಳು, ಎಂದು ಪರಿಚಯಿಸಿ ಪಾಸ್ಪೋರ್ಟ್ ಅನ್ನು ಬಲವಂತ ಕಸಿದುಕೊಂಡ ಈ ಮೂವರು, ವಿಚಾರಣೆಗಾಗಿ ತಮ್ಮ ಜೊತೆ ಬರುವಂತೆ ಎಳೆದೊಯ್ದಿದ್ದಾರೆ. ತಕ್ಷಣವೇ ಅನುಮಾನ ಬಂದ ಶಮಾಸ್ ಭದ್ರತಾ ಸಿಬ್ಬಂದಿ ಬಳಿ ಓಡಿ ಹೋಗಿ ಅವರ ಗಮನಕ್ಕೆ ತಂದಿದ್ದಾರೆ. ಆಗ ಕರ್ತವ್ಯ ನಿರತ ಪೊಲೀಸರು ಈ ಮೂವರನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಮೂವರು, ಮಹಮ್ಮದ್ ಶಮಾಸ್ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದು ತಾವು ಆತನಿಂದ ಚಿನ್ನ ಪಡೆದುಕೊಳ್ಳಲು ಬಂದವರು ಎಂದು ತಿಳಿಸಿದ್ದ ಈ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಶಮಾಸ್ ಸಹಿತ ನಾಲ್ವರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆ ಬಳಿಕ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.