ಪುತ್ತೂರು, ಡಿ 16 (Daijiworld News/MB) : ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಎಂಬಲ್ಲಿ ಡಿ.5ರಂದು ರಾತ್ರಿ ಮನೆಯಲ್ಲಿ ಸ್ಪೋಟಕ ಸಿಡಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕೃಷ್ಣ ಗೌಡ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಮೃತರು ಕಾಡುಪ್ರಾಣಿಗಳನ್ನು ಹತ್ಯೆ ಮಾಡಲು ಅಥವಾ ಬೇಟೆಯಾಡಲು ಸ್ಫೋಟಕ ಮಾದರಿಯ ವಸ್ತುಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುವ ವ್ಯಾಪಾರ ನಡೆಸುತ್ತಿದ್ದು, ಡಿ.5ರ ರಾತ್ರಿ ಸ್ಫೋಟಕ ತಯಾರಿ ಮಾಡುವ ವೇಳೆ ಆಕಸ್ಮಿಕವಾಗಿ ಸ್ಫೋಟಕ ಸಿಡಿದಿದ್ದು ಮೃತರಿಗೆ ಗಂಭೀರ ಗಾಯಗಳಾಗಿದ್ದು ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸ್ಫೋಟಕ ಸಿಡಿದ ಪರಿಣಾಮ ಮನೆಗೆ ಹಾಗೂ ಮನೆಯೊಳಗಿನ ಕಪಾಟಿಗೆ ಹಾನಿಯಾಗಿದ್ದು, ಕಿಟಕಿಯ ಗಾಜುಗಳು ಚೂರುಚೂರಾಗಿತ್ತು. ಹಾಗೆಯೇ ಈ ಸಂದರ್ಭ ಮನೆಯ ಹೊರಗೆ ಕಿಟಕಿಯ ಬಳಿ ಕುಳಿತ್ತಿದ್ದ ಬಾಲಕೃಷ್ಣ ಗೌಡ ಅವರ ನಾದಿನಿ ವೇದಾವತಿ (35), ಅವರ ಪುತ್ರಿ ಮೋನಿಕಾ (15), ಹಾಗೂ ಪುತ್ರ ಕಾರ್ತಿಕ್ (12) ಎಂಬವರಿಗೂ ಗಾಯಗಳಾಗಿದ್ದು ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಸ್ಫೋಟಕ ಸಿಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಬಾಲಕೃಷ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕದ ತೀವ್ರತೆ ಹಾಗೂ ಸ್ಫೋಟಕ ವಸ್ತುವಿನ ಮಹಜರಿಗಾಗಿ ಫೊರೆನಿಕ್ಸ್ ತಂಡ ಮಹಜರು ನಡೆಸಿದೆ.