ಮಂಗಳೂರು, ಜ 19: ಉಳ್ಳಾಲದ ತೊಕ್ಕೊಟು ಪೆರ್ಮನ್ನೂರಿನ ಸಮೀಪದ ಸಂತ ಸೆಬಾಸ್ಟಿಯನ್ ಚರ್ಚ್ ಶತಮಾನೋತ್ಸವದ ಸಂಭ್ರಮದಲ್ಲಿದೆ.
ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರ 1918ರಲ್ಲಿ ಸ್ಥಾಪನೆಗೊಂಡು ನೂರು ವರ್ಷಗಳನ್ನು ಪೂರೈಸಿದೆ. ಪೆರ್ಮನ್ನೂರು, ತೊಕ್ಕೊಟ್ಟು, ಉಳ್ಳಾಲ ಪರಿಸರದ ಜನರು 19 ನೇ ಶತಮಾನದಲ್ಲಿ ದೇರಳಕಟ್ಟೆ ಸಮೀಪದ ಪಾನೀರ್ ಇಗರ್ಜಿಯಲ್ಲಿ ದೇವರ ಆರಾಧನೆ ಮಾಡುತ್ತಿದ್ದರು. 300ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಿಂದ ದೇವರ ಆರಾಧನೆಗೆ ದೇರಳಕಟ್ಟೆ ಸಮೀಪವಿರುವ ಪಾನೀರ್ ಇಗರ್ಜಿಗೆ ತೆರಳುತ್ತಿದ್ದರು.
ತದನಂತರ 20ನೇ ಶತಮಾನದ ಆರಂಭದಲ್ಲಿ ಬಬ್ಬುಕಟ್ಟೆಯಲ್ಲಿ ಜನರ ಅನುಕೂಲಕ್ಕಾಗಿ ಸಣ್ಣ ಪ್ರಾರ್ಥನ ಮಂದಿರವನ್ನು ಕಟ್ಟಲಾಯಿತು. ಬಬ್ಬುಕಟ್ಟೆಯ ಪ್ರಾರ್ಥನ ಮಂದಿರದಲ್ಲಿ ಹಲವಾರು ವರುಷಗಳ ಕಾಲ ಆರಾಧನೆ ನಡೆಯುತ್ತಿತ್ತು. ನಂತರ ಪೆರ್ಮನ್ನೂರು ಪರಿಸರದ ಭಕ್ತಾದಿಗಳಿಗೆ ಸುಸಜ್ಜಿತ ಪ್ರಾರ್ಥನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈಗಿರುವ ಪೆರ್ಮನ್ನೂರು ಪ್ರದೇಶದಲ್ಲಿ ಚರ್ಚ್ ಸ್ಥಾಪಿಸಲಾಯಿತು.
ಇದೀಗ ಈ ಚರ್ಚ್ ಶತಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿರುವ ಹಿನ್ನೆಲೆ, ಜ.19, 20, 21 ರಂದು ಶತಮಾನೋತ್ಸವದ ಸಂಭ್ರಮ ಆಚರಿಸಲ್ಪಡುತ್ತಿದೆ. ಜ.20 ರಂದು ಸರ್ವ ಧರ್ಮ ಸಮ್ಮೇಳನ ನಡೆಯಲಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ, ವಂ. ಜಾನ್ ಎಸ್ ಸದಾನಂದ ಮತ್ತು ಬಶೀರ್ ಮದನಿ ಕೂಳೂರು ಸೌಹರ್ದ ಸಂದೇಶ ನೀಡಲಿದ್ದಾರೆ. ಮಂಗಳೂರು ಕೆಥೊಲಿಕ್ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ.