ಕಾರ್ಕಳ, ಡಿ 15 (DaijiworldNews/SM): ಬಜಗೋಳಿ ಮುಡಾರು ಸುಮ್ಮಗುತ್ತು ಮನೆಗೆ ನುಸುಳಿದ ಐವರ ತಂಡವೊಂದು ಮಹಿಳೆಯೊಬ್ಬರನ್ನು ಕಟ್ಟಿಹಾಕಿ ಇತರರ ಮೇಲೆ ಹಲ್ಲೆ ನಡೆಸಿ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.
ಮುಡಾರು ಶ್ರೀ ದುಗಾಪರಮೇಶ್ವರ ದೇವಳದ ಆಡಳಿತ ಮೊಕ್ತೇಸರಾಗಿದ್ದ ಜೀವಂಧರ್ ಹೆಗ್ಡೆ ಡಿಸೆಂಬರ್ 3ರಂದು ನಿಧನರಾಗಿದ್ದು, ಅವರು ವಾಸವಾಗಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಕುಶಲ ಹೆಗ್ಡೆ (40) ಎಂಬವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಾಯಿ ಲಲಿತಾ, ತಂಗಿ ಜಯಶ್ರೀ ಹಾಗೂ ಮಗಳು ಅನ್ವಿತಾ ಎಂಬವರೊಂದಿಗೆ ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ಟಿವಿ ವೀಕ್ಷಿಸುತ್ತಿದ್ದಾಗ ಐವರ ತಂಡವೊಂದು ಇವರ ಮನೆಗೆ ಒಳನುಸುಳಿದ್ದಾರೆ. ಅವರ ಪೈಕಿ ಓರ್ವ ಅಣ್ಣ ಎಲ್ಲಿ? ಎಂದು ಕನ್ನಡ ಬಾಷೆಯಲ್ಲಿ ಪ್ರಶ್ನಿಸಿದ್ದಾನೆ.
ಯಾವ ಅಣ್ಣ ಎಂದು ಕುಶಲ ಹೆಗ್ಡೆ ಮರು ಪ್ರಶ್ನೆ ಕೇಳುತ್ತಿದ್ದಂತೆ ಆಕೆಯ ಬಾವಿ, ಕೈ ಕಾಲುಗಳಿಗೆ ಗಮ್ ಟೇಪ್ ಹಚ್ಚಿದ್ದಾರೆ. ಐವರ ತಂಡ ಕೃತ್ಯ ಎಸಗಿದೆ. ಅಲ್ಲದೆ, ಮನೆಯಲ್ಲಿದ್ದ ಅನ್ವಿತಾಳಿಗೆ ಹಲ್ಲೆ ನಡೆಸಿದ್ದಾರೆ. ತಾಯಿ ಲಲಿತಾ ಅವರನ್ನು ದೂಡಿ ಹಾಕಿ ಮನೆಯ ಮಾಳಿಗೆಗೆ ಹೋಗಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕುಶಲ ಹೆಗ್ಡೆಯ ಗಂಡನ ಅಕ್ಕ ಸತ್ಯವತಿ ಬಲ್ಲಾಳ್ ಅವರು ಆಟೋ ರಿಕ್ಷಾದಲ್ಲಿ ಮನೆಗೆ ಬಂದುದನ್ನು ನೋಡಿ ಆರೋಪಿಗಳು ಮನೆಯ ಮುಂಭಾಗದ ಹಾಡಿ ಕಡೆಗೆ ಓಡಿ ಪರಾರಿಯಾಗಿದ್ದಾರೆ.
ಆರೋಪಿಗಳು ಮಾಳಿಗೆಯಲ್ಲಿರುವ ಎರಡು ಕಬ್ಬಿಣದ ಬೀರುಗಳ ಪೈಕಿ ಒಂದರ ಬಾಗಿಲನ್ನು ತೆರೆದಿದ್ದು ಮುಂದೆ ನಡೆಸಲು ಉದ್ದೇಶಿಸಿದ ಕೃತ್ಯ ನಡೆಸದೇ ಪರಾರಿಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.