ಕಾಸರಗೋಡು, ಡಿ 15 (DaijiworldNews/SM): ನಾರಂಪಾಡಿ ಜೋನ್ ಡಿ ಬ್ರಿಟ್ಟೊ ಚರ್ಚ್ ನ ಧರ್ಮಗುರುಗಳ ನೂತನ ವಸತಿಯ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ನೆರವೇರಿಸಿದರು.
ಬಳಿಕ ಅವರ ನೇತೃತ್ವದಲ್ಲಿ ಚರ್ಚ್ ನಲ್ಲಿ ಬಲಿಪೂಜೆ ನೆರವೇರಿತು. ಕಾಸರಗೋಡು ವಲಯ ವಿಕಾರ್ ವಾರ್ ಹಾಗೂ ಬೇಳ ಶೋಕಮಾತ ಧರ್ಮಕ್ಷೇತ್ರದ ಧರ್ಮಗುರು ಫಾದರ್ ಜೋನ್ ವಾಸ್, ಮಂಗಳೂರು ಸೆಮಿನರಿಯ ರೆಕ್ಟರ್ ಫಾದರ್ ರೊನಾಲ್ಡ್ ಸೆರಾವೋ, ನಾರಂಪಾಡಿ ಚರ್ಚ್ ಧರ್ಮಗುರು ಫಾದರ್ ಜೋನ್ ಬ್ಯಾಪ್ಟಿಸ್ಟ್ ಮೊರಾಸ್ ಹಾಗೂ ಕಾಸರಗೋಡು ವಲಯ ಮತ್ತು ಧರ್ಮಪ್ರಾಂತ್ಯದ ಧರ್ಮಗುರುಗಳು ಪಾಲ್ಗೊಂಡಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿನ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ಹೆಲೆನ್, ಪಾಲನಾ ಸಮಿತಿ ಉಪಾಧ್ಯಕ್ಷ ಜೋಸೆಫ್ ಮೊಂತೇರೊ, ಕಾರ್ಯದರ್ಶಿ ಮೆಟಿಲ್ಡಾ ಡಿ ಅಲ್ಮೇಡಾ ಮೊದಲಾದರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖ ದಾನಿಗಳಾದ ಮೈಕಲ್ ಡಿ ಸೋಜ ಮಂಗಳೂರು, ವಿನ್ಸೆಂಟ್ ಡೇಸಾ ಮುಂಬೈ, ಬಂಟ್ವಾಳ ಬೋರಿಮಾರ್ ನ ರೋಷನ್ ಮಾರ್ಟಿಸ್ ರವರನ್ನು ಹಾಗೂ ಕಟ್ಟಡ ಕಾಮಗಾರಿಗೆ ದುಡಿದವರನ್ನು ಹಾಗೂ ನೆರವಾದವರನ್ನು ಸನ್ಮಾನಿಸಲಾಯಿತು. ಜೆರೋಮ್ ಡಿಸೋಜ ರವರ ಕುಟುಂಬಸ್ಥರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳ ತರಬೇತಿ ಕೇಂದ್ರವಾದ ಸೆಮಿನರಿಗೆ ಒಂದು ಲಕ್ಷ ರೂಪಾಯಿಗಳ ಚೆಕ್ ನ್ನು ಸಮಾರಂಭದಲ್ಲಿ ಧರ್ಮಾಧ್ಯಕ್ಷರಿಗೆ ಹಸ್ತಾ೦ತರಿಸಿತು.